December 13, 2025

ಮೌಂಟ್ ಅಬು: ಬ್ರಹ್ಮಾಕುಮಾರಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮೀಡಿಯಾ ಸಮ್ಮೇಳನ ಭವ್ಯವಾಗಿ ಆರಂಭಗೊಂಡಿತು. ಜೀವನದಲ್ಲಿ ದುಃಖ, ಭಯ ಮತ್ತು ಅಶಾಂತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಧ್ಯಾನದ ಅವಶ್ಯಕತೆಯನ್ನು ಒತ್ತಿಹೇಳಿದ ಸಂಸ್ಥೆಯ ಆಡಳಿತಾಧಿಕಾರಿಣಿ ಮೋಹಿನಿ ದೀದಿ, “ಮಾಧ್ಯಮದವರು ಸಮಾಜದಲ್ಲಿ ಏಕತೆ, ಶಾಂತಿ ಮತ್ತು ವಿಶ್ವಾಸ ಸ್ಥಾಪನೆಗೆ ಪ್ರಯತ್ನಿಸಬೇಕು” ಎಂದು ಸಲಹೆ ನೀಡಿದರು.

ರಾಜ್ಯಪಾಲ ಬಾಗಡೆ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, “ಬ್ರಹ್ಮಾಕುಮಾರಿ ಸಂಸ್ಥೆ ಪ್ರಾಚೀನ ಭಾರತೀಯ ಸಂಸ್ಕೃತಿ ಜ್ಞಾನದ ಪ್ರಸಾರ ಮಾಡುತ್ತಿರುವ ಅಪರೂಪದ ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇಷ್ಟು ದೊಡ್ಡ ಸಂಸ್ಥೆ ಜಗತ್ತಿನಲ್ಲಿ ಇನ್ನಿಲ್ಲ” ಎಂದು ಶ್ಲಾಘಿಸಿದರು. ಅವರು ಭಾರತ ದೇಶವು ಯೋಗಿ ಮಹಾತ್ಮರ ನಾಡಾಗಿದ್ದು, ಹಾಲಿನ ಉತ್ಪಾದನೆಯಲ್ಲಿ ಪ್ರಥಮ ಹಾಗೂ ಗೋಧಿ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ತಿಳಿಸಿದರು.

ರಾಜಯೋಗಿ ಬ್ರಹ್ಮಾಕುಮಾರ್ ಕರುಣಜಿ, “ಮಾಧ್ಯಮ ಮಿತ್ರರು ರಾಜಯೋಗ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಬೇಕು” ಎಂದು ಕರೆ ನೀಡಿದರು. ತಾವು 34 ವರ್ಷಗಳ ಮಾಧ್ಯಮ ಸೇವೆಯನ್ನು ನೆನಪಿಸಿಕೊಂಡರು.

ಸಮ್ಮೇಳನದ ಉದ್ದೇಶವನ್ನು ವಿವರಿಸಿದ ಬ್ರಹ್ಮಾಕುಮಾರಿ ಸರಳ ದಿದಿ, “ಈ ವರ್ಷದ ಧ್ಯೇಯ ವಾಕ್ಯ ಶಾಂತಿ, ಏಕತೆ ಮತ್ತು ವಿಶ್ವಾಸದ ವೃದ್ಧಿ” ಎಂದು ತಿಳಿಸಿದರು. ಮೀಡಿಯಾ ವಿಭಾಗದ ಮುಖ್ಯ ಸಂಯೋಜಕರಾದ ಬ್ರಹ್ಮಾಕುಮಾರ್ ಶಾಂತನು, ಆಗಮಿಸಿದ ಪ್ರತಿನಿಧಿಗಳಿಗೆ ಸ್ವಾಗತ ಕೋರಿದರು. ಕಾರ್ಯಕ್ರಮದ ನಿರೂಪಣೆ ಬ್ರಹ್ಮಾಕುಮಾರಿ ಚಂದ್ರಕಲಾ, ಜೈಪುರ್ ಅವರು ನಿರ್ವಹಿಸಿದರು.

ಮಾಜಿ ಕುಲಪತಿ ಮನಸಿಂಗ ಪರಮಾರ ಹಾಗೂ ಕುಶಾಲ್ ಬಾವು ಠಾಕ್ರೆ, “ಇಂದಿನ ವಿಶ್ವದಲ್ಲಿ ಶಾಂತಿ ಮತ್ತು ಏಕತೆಯ ಅವಶ್ಯಕತೆ ಹೆಚ್ಚಿದೆ” ಎಂದು ಅಭಿಪ್ರಾಯಪಟ್ಟರು. ಪ್ರೊ. ಸಂಜಯ ದ್ವಿವೇದಿ, “ಪತ್ರಕರ್ತರು ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಯ ವಾಹಕರಾಗಿದ್ದು, ದೇಶವನ್ನು ನೋಡುವ ಕಣ್ಣುಗಳಂತಿದ್ದಾರೆ” ಎಂದು ಹೇಳಿದರು.

ಅಜಿತ್ ಪಾಠಕ್ (ಡೆಲ್ಲಿ), ಅಮಿತ್ ತ್ಯಾಗಿ, ನಿಲೇಶ್ ಖರೆ ಮತ್ತು ಸೋಹಿನಿ ಶಾಸ್ತ್ರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಮಹಾಸಮ್ಮೇಳನದಲ್ಲಿ ಭಾರತ ಹಾಗೂ ನೇಪಾಳದ 1500 ಪ್ರಿಂಟ್, ಎಲೆಕ್ಟ್ರಾನಿಕ್ ಹಾಗೂ ಸೈಬರ್ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ರಾಜಯೋಗ ಶಿಕ್ಷಣ, ಆಂತರಿಕ ಶಕ್ತಿ, ಪರಮಾತ್ಮನೊಂದಿಗೆ ಸಂಬಂಧ, ಕರ್ಮಗತಿ, ಸೋಶಲ್ ಮೀಡಿಯಾ ಹಾಗೂ ಸಮಾಜಕ್ಕಾಗಿ ಮಾಧ್ಯಮದ ಪಾತ್ರ ಕುರಿತು ಕಮ್ಮಟಗಳು ನಡೆಯಲಿವೆ. ಜೊತೆಗೆ ಮಾಧ್ಯಮ ಜಾಗೃತಿ ಮೂಡಿಸಲು 5 ವಿಶೇಷ ಪ್ರದರ್ಶನ ಮಳಿಗೆಗಳನ್ನು ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771