ಔರಾದ್ : ಆರೋಗ್ಯಕರ ಬೆಳವಣಿಗೆ ರೂಢಿಸಿಕೊಂಡು ಅಪೌಷ್ಟಿಕತೆ ತಡೆಯಲು ಮಕ್ಕಳಲ್ಲಿ ನೈರ್ಮಲ್ಯ ಮತ್ತು ಪರಿಸರ ಜಾಗೃತಿ ಅತ್ಯಾವಶ್ಯಕ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಅಭಿಪ್ರಾಯಪಟ್ಟರು.
ತಾಲೂಕಿನ ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವಾಟರ್‌ಶೆಡ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಚ್ಛತೆಬಕಿರು ನಾಟಕ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿ ಶುಚಿತ್ವದ ಕುರಿತು ತಿಳಿವಳಿಕೆ ಮೂಡಿಸಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಬಯಲು ಶೌಚಮುಕ್ತ ಗ್ರಾಮಗಳೆಂದು ಘೋಷಣೆಗಳಾಗಿದ್ದರೂ ಕೂಡ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿಲ್ಲ.
ಸ್ವಚ್ಛತೆ ಬದುಕಿನ ಭಾಗವಾಗಬೇಕು. ಯಾವುದೇ ಒಂದು ದಿನಕ್ಕೆ ಸೀಮಿತಗಿರದೆ ನಿತ್ಯ ನಿರಂತರ ಸ್ವಚ್ಛತೆ, ನೀರಿನ ಮಿತ ಬಳಕೆಯ ಕುರಿತು ಕಾಳಜಿವಹಿಸಬೇಕು. ಅಂತರ್ಜಲ ಸಂರಕ್ಷಿಸುವ ನಿಟ್ಟಿನಲ್ಲಿ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ರಾಜೇಂದ ಮಾಳಿ ಮಾತನಾಡಿ, ನೀರು ನಮಗೆ ದೊರೆತ ಅತ್ಯಮೂಲ್ಯ ಆಸ್ತಿ, ಅದನ್ನು ಸಂರಕ್ಷಿಸಲು ವಾಟರ್ ಶೆಡ್ ಸಂಸ್ಥೆಯ ಯೋಜನೆಗಳು ತುಂಬ ಉಪಯುಕ್ತವಾಗಿವೆ. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛವಾಗಿಡುವುದು ಅತಿ ಮುಖ್ಯ ಎಂದರು.
ಬಸವಕಲ್ಯಾಣ ಜೈ ಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘದ ವಿಜಯಲಕ್ಷ್ಮಿ, ಡಿಲೆಮಾ ಅಣದೂರ, ಮಧುಕರ ಘೋಡಕೆ, ಯೇಸುದಾಸ್ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತೆ ಜಾಗೃತಿ, ಬಯಲು ಬಹಿರ್ದೆಸೆ ಸಂಬಂಧಿತ ಕಿರು ನಾಟಕಗಳು ಮಕ್ಕಳ ಮನಸೂರೆಗೊಂಡವು.
ತಾಲೂಕು ಯೋಜನಾ ವ್ಯವಸ್ಥಾಪಕ ಸಿದ್ದಪ್ಪ ಭಾಲ್ಕೆ ಮಾತನಾಡಿದರು. ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ರಣಧೀರ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಧನರಾಜ ಪಿಟ್ರೆ, ಜಗದೀಶ ಪಾಟೀಲ್, ರಿಷಿಕೇಶ ಶಿಂದೆ, ರವಿಕುಮಾರ ಮಠಪತಿ, ಕಂದಾಯ ನೀರಿಕ್ಷಕ ನರಸಿಮ್ಲು, ಸಿಆರ್‌ಪಿ ಮಹಾದೇವ ಘುಳೆ, ಕಲ್ಪನಾ ಪಾಟೀಲ್ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ, ಸಬೀತಾ, ಕಾವೇರಿ, ಸುರೇಖಾ ಸೇರಿದಂತೆ ಶಾಲಾ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.