September 7, 2025

ಔರಾದ:-ಔರಾದ ಹಾಗೂ ಕಮಲನಗರ ತಾಲ್ಲೂಕುಗಳನ್ನು ಅತೀವೃಷ್ಠಿ ಪ್ರದೇಶಗಳೆಂದು ಘೋಷಿಸಿ, ಹಾನಿಗೊಳಗಾದ ಜನತೆಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

 

ಬೆಂಗಳೂರಿನಲ್ಲಿ ಆ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತೀವೃಷ್ಠಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

 

ಕೆಲವು ದಿನಗಳಿಂದ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ಭಾನುವಾರ ಒಂದೇ ದಿನ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 300 ಎಂ.ಎಂ ಮಳೆ ದಾಖಲಾಗಿದೆ. ಪ್ರತಿ ವರ್ಷ ಬರಗಾಲ ಆವರಿಸುವ ಕ್ಷೇತ್ರದಲ್ಲಿ ಈ ಬಾರಿ ಸುರಿದ ಮಳೆಯ ಪ್ರಮಾಣವು ಸಾಮಾನ್ಯ ಮಿತಿಯನ್ನು ಮೀರಿದ್ದು, ಬಿತ್ತನೆಯಾದ ಸೋಯಾಬೀನ್, ಉದ್ದು, ಹೆಸರು, ಜೋಳ, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿವೆ. ಸಾವಿರಾರು ಹೆಕ್ಟೇರ್ ಬೆಳೆ ನಷ್ಟವಾಗಿದೆ. 100ಕ್ಕೂ ಮೇಲ್ಪಟ್ಟು ರೈತರ ಜಾನುವಾರುಗಳು ಸಾವನಪ್ಪಿವೆ ಎಂದು ತಿಳಿಸಿದ್ದಾರೆ.

 

ರೈತರು ಸಾಲ ಮಾಡಿ ಬೆಳೆದ ಬೆಳೆಗಳು ನೆಲಸಮವಾಗಿ ನಾಶವಾಗಿದ್ದು, ಅವರ ಜೀವನ ಭವಿಷ್ಯ ಗೊಂದಲಕ್ಕೆ ತಳ್ಳಲ್ಪಟ್ಟಿದೆ. ಜೊತೆಗೆ ಗ್ರಾಮಗಳು ಜಲಾವೃತ್ತಗೊಂಡು ಸುಮಾರು 50 ಕ್ಕೂ ಹೆಚ್ಚು ಮನೆಗಳು ಕುಸಿದು ಕುಟುಂಬಗಳು ಬೀದಿಗೆ ಬಂದಿವೆ. ಅಷ್ಟೇ ಅಲ್ಲದೆ, ನಂದಿ ಬಿಜಲಗಾಂವ-ಚಿಕ್ಲಿ ಸೇತುವೆ, ಸಾವರಗಾಂವ-ಹಂಗರಗಾ ಸೇತುವೆ ಸೇರಿ ಹಲವು ಸೇತುವೆ, ಕೆರೆ-ಕಟ್ಟೆಗಳು ಒಡೆದು ಹಾನಿ ಸಂಭವಿಸಿದೆ. ರಸ್ತೆ, ವಿದ್ಯುತ್ ಲೈನ್‌ಗಳು, ನೀರು ಸರಬರಾಜು ವ್ಯವಸ್ಥೆಗಳು ಹಾನಿಗೊಳಗಾಗಿದ್ದು, ಸಾರಿಗೆ, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಗ್ರಾಣ, ಶಾಲೆ, ಅಂಗನವಾಡಿಗಳು, ಸರ್ಕಾರಿ ಕಚೇರಿಗಳು ನೀರಿನಿಂದ ಹಾನಿಗೊಂಡು ಕಛೇರಿ ಕೆಲಸಗಳಿಗೂ ಅಡೆತಡೆಯಾಗುತ್ತಿದೆ ಎಂದು ಕ್ಷೇತ್ರದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.

 

ಈ ತುರ್ತು ಪರಿಸ್ಥಿತಿಯನ್ನು ಮನಗಂಡು, ಔರಾದ(ಬಿ) ವಿಧಾನಸಭಾ ಕ್ಷೇತ್ರದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಕೂಡಲೇ ಅತೀವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಿ, ಹಾನಿಗೊಳಗಾದ ಜನತೆಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ. ಇದೇ ವೇಳೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ‌ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ.

 

ನನ್ನ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಔರಾದ(ಬಿ)‌ ಹಾಗೂ ಕಮಲನಗರ ತಾಲ್ಲೂಕುಗಳನ್ನು ಅತೀವೃಷ್ಠಿ ಪ್ರದೇಶಗಳೆಂದು ಘೋಷಿಸುವ ಭರವಸೆಯಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವರದಿಗಾರರು :-ಎಸ್.ಎಸ್.ದಿಂಡೆ

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771