
ಔರಾದ:-ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಅತೀವೃಷ್ಠಿಯಿಂದ ಕೆರೆ-ಕಟ್ಟೆಗಳು ಒಡೆದಿದ್ದು, ರಸ್ತೆ, ಸೇತುವೆ, ಜಾನುವಾರುಗಳು ಕೊಚ್ಚಿ ಹೋಗಿವೆ. ಸಾವಿರಾರು ಎಕರೆ ಬೆಳೆ ನಷ್ಟವಾಗಿದ್ದು ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿದ ಶಾಸಕರು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತೀ ಹೆಚ್ಚು ಮಳೆ ಔರಾದ(ಬಿ) ಕ್ಷೇತ್ರದಲ್ಲಾಗಿದೆ. ಒಂದೇ ದಿನ 300 ಎಂ.ಎಂ ಮಳೆ ದಾಖಲಾಗಿದ್ದು, ಸುಮಾರು 30 ರಿಂದ 40 ಜಾನುವಾರುಗಳು ಮೃತಪಟ್ಟಿವೆ. 100 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.
ರೈತರು ಬೆಳೆದ ಉದ್ದು, ಹೆಸರು, ಸೋಯಾಬೀನ್, ಜೋಳ, ತೊಗರಿ, ಹತ್ತಿ ಸೇರಿದಂತೆ ಎಲ್ಲ ಬೆಳೆಗಳು ಮುಳುಗಡೆಯಾಗಿವೆ. ಅಂದಾಜು 10 ಸಾವಿರ ಎಕರೆಯಷ್ಟು ಬೆಳೆ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರಸ್ತೆ, ಸೇತುವೆ, ಕೆರೆಗಳು ಒಡೆದಿರುವುದರಿಂದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಚಿಕ್ಲಿ, ನಂದಿ ಬಿಜಲಗಾಂವ, ಬೋಂತಿ, ದಾಬಕಾ, ನಾಗಮಾರಪಳ್ಳಿ ಸೇರಿದಂತೆ ಎಲ್ಲ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಯಾಗಿದೆ ಎಂದು ಅತೀವೃಷ್ಠಿಯಿಂದ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಯ ಕುರಿತು ವಿವರಣೆ ನೀಡಿದರು.
ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ನಮ್ಮದು ಗಡಿ ತಾಲ್ಲೂಕು ಮತ್ತು ಹಿಂದುಳಿದ ಪ್ರದೇಶವಾಗಿದ್ದು, ಮುಖ್ಯಮಂತ್ರಿಗಳು ಔರಾದ(ಬಿ) ಕ್ಷೇತ್ರವನ್ನು ಅತೀವೃಷ್ಠಿ ಪ್ರದೇಶವೆಂದು ಘೋಷಿಸಿ ವಿಶೇಷ ಅನುದಾನ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.