September 7, 2025

ಔರಾದ:-ಎರಡು ತಾಲ್ಲೂಕುಗಳನ್ನು ಹೊಂದಿರುವ ಔರಾದ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ಈ ದಿಶೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವರು ಹಾಗೂ ಔರಾದಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.

ತಾಲ್ಲೂಕು ಆಡಳಿತದ ವತಿಯಿಂದ ಆಗಸ್ಟ್ 15ರಂದು ಔರಾದ(ಬಿ) ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ಉತ್ಸವ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಜನತೆಯ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಔರಾದ(ಬಿ) ಕ್ಷೇತ್ರ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ. ಹಿಂದೆ ರಸ್ತೆಗಳೇ ಇರಲಿಲ್ಲ. ಇದೀಗ ಎರಡು ರಾಷ್ಟ್ರೀಯ ಹೆದ್ದಾರಿಗಳಾಗಿವೆ. ಮಾಳೆಗಾಂವ, ಚಿಮ್ಮೇಗಾಂವ ಗ್ರಾಮಗಳ ವ್ಯಾಪ್ತಿಯಲ್ಲಿ 164 ಎಕರೆಯಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರಿಡ್ ಸೆಂಟರ್‌ನ 2147 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದರು.

ವನಮಾರಪಳ್ಳಿಯಲ್ಲಿ 22 ಕೋಟಿಯ ಕಿತ್ತೂರು ಚನ್ನಮ್ಮ ವಸತಿ ಶಾಲೆ, ಚಿಮ್ಮೇಗಾಂವನಲ್ಲಿ 20 ಕೋಟಿಯ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಬಲ್ಲೂರ(ಜೆ)ನಲ್ಲಿ 20 ಕೋಟಿಯ ಇಂದಿರಾಗಾಂಧಿ ವಸತಿ ಶಾಲೆ, 18 ಕೋಟಿ ವೆಚ್ಚದ ಹೊರಂಡಿ, ಚಿಂತಾಕಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಕಮಲನಗರದಲ್ಲಿ ಮಿನಿ ವಿಧಾನಸೌಧಕ್ಕೆ 15 ಕೋಟಿ, 13.20 ಕೋಟಿಯ ಸುಸಜ್ಜಿತ ನ್ಯಾಯಾಲಯಗಳ ಸಂಕೀರ್ಣ, 10 ಕೋಟಿ ವೆಚ್ಚದಲ್ಲಿ ವಿಶಾಲ ಉಗ್ರಾಣ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತರಲಾಗಿದೆ.

ಔರಾದಪಟ್ಟಣ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಪಟ್ಟಣಕ್ಕೆ ಮಾಸ್ಟರ್ ಪ್ಲಾನ್ ಮಂಜೂರು ಮಾಡಿಸಿದ್ದೇನೆ. ಟ್ರೀ ಪಾರ್ಕ್, ಹೈಟೆಕ್ ಪಶು ಆಸ್ಪತ್ರೆ, ಪದವಿ ಕಾಲೇಜು, ಡಿಪ್ಲೋಮಾ ಕಾಲೇಜು, ಐಟಿಐ ಕಾಲೇಜು, ವಸತಿ ಶಾಲೆಗಳು, ಸುಸಜ್ಜಿತ ಪಟ್ಟಣ ಪಂಚಾಯಿತಿ ಕಟ್ಟಡ, ಆದರ್ಶ ವಿದ್ಯಾಲಯದಲ್ಲಿ ಪಿಯಸಿ ಆರಂಭ, ಶಾಲೆ, ಕಾಲೇಜುಗಳು, ಅಂಗನವಾಡಿ ಕಟ್ಟಡ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಔರಾದ ಪಟ್ಟಣ ಮಾದರಿಯಾಗಲಿದೆ. ಕಮಲನಗರ ತಾಲ್ಲೂಕಿನಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ದೇಶ ಅನೇಕ ಬಲಿದಾನಗಳ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯದ ಮಹತ್ವ, ಹೋರಾಟಗಾರರ ಬಗ್ಗೆ ಮುಂದಿನ ಪೀಳಿಗೆಗೆ ಸರಿಯಾಗಿ ತಿಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಅಭಿಯಾನವನ್ನು ಆರಂಭಿಸಿದ್ದಾರೆ.

ಔರಾದ ಸೇರಿದಂತೆ ದೇಶದೆಲ್ಲೆಡೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಭವಿಷ್ಯದ ನಾಗರಿಕರಾದ ಮಕ್ಕಳಿಗೆ ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಈ ವೇಳೆ ಇತಿಹಾಸ ತಜ್ಞರಾದ ಡಾ.ಶಿವಕುಮಾರ ಉಪ್ಪೆ ಅವರು ವಿಶೇಷ ಉಪನ್ಯಾಸ ನೀಡಿ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳು, ಅದರ ಮಹತ್ವದ ಕುರಿತು ವಿವರಣೆ ನೀಡಿದರು.

ಭಾರತ ದೇಶವು ಬ್ರಿಟಿಷರ ದಾಸ್ಯದ ಸಂಕೋಲೆಗಳಿಂದ ಮುಕ್ತಗೊಂಡು ಸ್ವಾತಂತ್ರ್ಯ ಗಳಿಸಿದ ದಿನವಾದ ಆಗಸ್ಟ್ 15 ಅನ್ನು ಪ್ರತಿವರ್ಷವೂ ಭಾರತೀಯರು ಸ್ವಾತಂತ್ರ್ಯ ದಿನಾಚರಣೆಯಾಗಿ ಆಚರಿಸುತ್ತಾರೆ. 1947ರ ಆಗಸ್ಟ್ 14ರ ಮಧ್ಯರಾತ್ರಿಯಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಹಸ್ತಾಂತರಿಸಿ ಹೊರಟರು. ಇದು ಭಾರತದ ರಾಷ್ಚ್ರೀಯ ಹಬ್ಬ. ಈ ವೇಳೆ ದೇಶದ ಪುಟ್ಟ ಹಳ್ಳಿಯಿಂದ ಹಿಡಿದು ರಾಷ್ಟ್ರರಾಜಧಾನಿ ದಿಲ್ಲಿವರೆಗೂ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಇದು ದೇಶದ ಪ್ರತಿಯೊಬ್ಬ ದೇಶದ ನಾಗರಿಕನ ಸ್ವಾತಂತ್ರ್ಯದ ಸಂಕೇತ. ಇದೀ ದೇಶ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಹೊಸ ಸೂರ್ಯೋದಯವನ್ನು ಕಂಡ ದಿನ ವಾಗಿದೆ ಎಂದರು.

ಪೊಲೀಸ್ ಇಲಾಖೆ ಇಂದ ಆಕರ್ಷಕ ಪಥ ಸಂಚಲನ

ವಸೀಮ್ ಪಟೇಲ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸೇರಿ ವಿವಿಧ ಶಾಲಾ ಕಾಲೇಜುಗಳ ತಂಡದವರು ಪಾಲ್ಗೊಂಡರು. ಇದೇ ವೇಳೆ ವಿವಿಧ ಶಾಲೆ-ಕಾಲೇಜಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕರಾದ ಸತೀಷ ಮಜಗೆ, ಮಹಾನಂದ ಎಂಡೆ ಅವರು ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಪಂಚಾಯತ ಅಧ್ಯಕ್ಷರಾದ ಸರುಬಾಯಿ ಘೂಳೆ, ಧೊಂಡಿಬಾ ನರೋಟೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಶಿವಕುಮಾರ ಘಾಟೆ, ಡಾ.ಗಾಯತ್ರಿ, ರವೀಂದ್ರ, ಧೂಳಪ್ಪ ಸೇರಿದಂತೆ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771