*ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯತ್ನಿಸಿ: ಶಾಸಕ ಪ್ರಭು ಚವ್ಹಾಣ*
ಔರಾದ:-ಬೇಸಿಗೆಯ ಬಿಸಿಲು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಏ.2ರಂದು ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಅನೇಕ ಕಡೆಗಳಲ್ಲಿ ಬೋರ್‌ವೆಲ್ ರಿಪೇರಿ, ಪೈಪ್ ದುರಸ್ತಿ, ವಿದ್ಯುತ್ ತಂತಿಗಳಲ್ಲಿ ದೋಷದಂತಹ ಸಣ್ಣ ಸಮಸ್ಯೆಗಳಿದ್ದರೂ ನೀರಿನ ಪೂರೈಕೆ ಸ್ಥಗತಗೊಳ್ಳುತ್ತಿರುವುದು ಕಂಡುಬರುತ್ತಿದೆ. ಸಣ್ಣ-ಪುಟ್ಟ ಸಮಸ್ಯೆಗಳಿದ್ದಲ್ಲಿ ತಕ್ಷಣ ದುರಸ್ತಿ ಕೈಗೊಂಡು ನೀರಿನ ಪೂರೈಕೆ ಆರಂಭಿಸಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಗೆ ನಿರ್ದೇಶನ ನೀಡಿದರು.
ಕೆಲವೊಂದು ಗ್ರಾಮಗಳಲ್ಲಿ ಜಲಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೂ ಕೂಡ ನಿಷ್ಕಿçÃಯ ವಾಟರ್‌ಮೆನ್‌ಗಳಿಂದಾಗಿ ನೀರು ಸರಬರಾಜಿಗೆ ತೊಡಕಾಗುತ್ತಿದೆ ಎಂದು ಗ್ರಾಮಸ್ಥರು ದೂರುಗಳನ್ನು ನೀಡುತ್ತಿದ್ದಾರೆ. ಇಂಥವರನ್ನು ಗುರುತಿಸಿ ಯಾವುದೇ ಮುಲಾಜಿಲ್ಲದೇ ಅಮಾನತುಗೊಳಿಸಿ ಒಳ್ಳೆಯವರನ್ನು ನೇಮಿಸಿಕೊಳ್ಳಿ. ಇಲ್ಲವಾದರೆ ತಾವೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇನ್ನು ಎರಡು ತಿಂಗಳು ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲಿರುವ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ತುರ್ತು ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ನೀರು ಪೂರೈಸಿ, ಖಾಸಗಿ ಬೋರ್‌ವೆಲ್‌ಗಳಿದ್ದಲ್ಲಿ ಅವರ ಮನವೊಲಿಸಿ ನೀರು ಪಡೆಯಲು ಮುಂದಾಗಿ. ಆದರೆ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಬಾರದು. ಮಹಿಳೆಯರು ಕೊಡಗಳನ್ನು ಹಿಡಿದು ಬೀದಿ ಬೀದಿ ಅಲೆಯುವ ಪರಿಸ್ಥಿತಿ ಎಲ್ಲಿಯೂ ಕಾಣಬಾರದು ಎಂದು ಹೇಳಿದರು.
ಬೇಸಿಗೆ ಮುಗಿಯುವ ವರೆಗೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ತಮ್ಮ ಮೊಬೈಲ್ ಫೋನ್‌ಗಳನ್ನು ಚಾಲ್ತಿಯಲ್ಲಿ ಇಟ್ಟುಕೊಂಡು, ಸಾರ್ವಜನಿಕರ ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸಂಬAಧಿಸಿದ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ರಜೆ ಪಡೆಯುವುದು, ಗೈರು ಹಾಜರಾಗುವುದು ಮಾಡುವಂತಿಲ್ಲ. ಎಲ್ಲ ಅಧಿಕಾರಿಗಳು ಜನತೆಗೆ ಲಭ್ಯವಿರಬೇಕು. ಈ ವಿಷಯದಲ್ಲಿ ದೂರುಗಳು ಬಂದರೆ ನಾನು ಸಹಿಸುವುದಿಲ್ಲವೆಂದು ಶಾಸಕರು ಎಚ್ಚರಿಕೆ ನೀಡಿದರು.
ತಾಲ್ಲೂಕು ಮಟ್ಟದ ತಂಡ ರಚನೆಗೆ ಸೂಚನೆ: ಕುಡಿಯುವ ನೀರಿನ ಸಮಸ್ಯೆಯ ಕುರಿತು ನಿಗಾ ವಹಿಸಲು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ, ಜೆಸ್ಕಾಂ ಎಇಇ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿಕೊಂಡು ಗ್ರಾಮಗಳಲ್ಲಿ ಸಂಚರಿಸಿ ನೀರಿನ ಸಮಸ್ಯೆ, ಜೆಜೆಎಂ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನೀರು ಸರಬರಾಜು ಕಾಮಗಾರಿಗಳು ಹೇಗೆ ನಡೆದಿವೆ ? ಶಾಶ್ವತ ಪರಿಹಾರಕ್ಕೆ ಏನು ಮಾಡಬಹುದೆಂಬ ಅಭಿಪ್ರಾಯಗಳನ್ನು ಕೊಡಬೇಕು ಎಂದು ತಿಳಿಸಿದರು.
ಜೆಜೆಎಂ ಕಾಮಗಾರಿ ಹಸ್ತಾಂತರ- ಪಿಡಿಓಗಳ ವಿರುದ್ಧ ಕೆಂಡ: ಜಲ ಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದರೂ ಕೂಡ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಂಡಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಪರೀಶೀಲಿಸದೇ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ ಬಂದರೂ ಕೂಡ ಕ್ಷೇತ್ರದಾದ್ಯಂತ 153 ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಯಾರು ಹೊಣೆಗಾರರಾಗುತ್ತಾರೆ ? ನೀರು ಲಭ್ಯವಿದ್ದು, ಎಲ್ಲ ಮನೆಗಳಿಗೆ ನೀರು ಸರಬರಾಜು ಆಗುತ್ತಿದ್ದರೆ ಮಾತ್ರ ಹರ್ ಘರ್ ಜಲ್ ಘೋಷಣೆ ಮಾಡಬೇಕೆಂಬ ನಿಯಮವಿದೆ. ಆದರೆ ಬಹಳಷ್ಟು ಕಡೆಗಳಲ್ಲಿ ಕೆಲಸ ಇನ್ನು ಬಾಕಿ ಇದ್ದರೂ ಕೂಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಆಮೀಷ ನೀಡಿ ಕಾಮಗಾರಿ ಹಸ್ತಾಂತರ ಮಾಡಲಾಗಿದೆ. ಕಾಮಗಾರಿ ಸರಿಯಾಗಿ ಮಾಡಲು ತೋರದ ಆಸಕ್ತಿ ಹಸ್ತಾಂತರಕ್ಕೆ ಏಕೆ ತೋರಿಸುತ್ತಿದ್ದೀರಿ ? ಇದರಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿರುವುದು ಕಂಡುಬರುತ್ತಿದೆ ಎಂದು ಬೇಸರ ಹೊರ ಹಾಕಿದರು.
ಕಳಪೆ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಸದಾಶಯದೊಂದಿಗೆ ಕ್ಷೇತ್ರಕ್ಕೆ 250 ಕೋಟಿಗೂ ಹೆಚ್ಚು ಅನುದಾನ ತಂದು ಕಾಮಗಾರಿಯನ್ನು ಆರಂಭಿಸಿದ್ದೇನೆ. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಸಂಪೂರ್ಣ ಯೋಜನೆಯನ್ನು ಹಳ್ಳ ಹಿಡಿಸಿದ್ದಾರೆ. ಗ್ರಾಮ ಸಂಚಾರದ ಸಂದರ್ಭದಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಜೆಜೆಎಂ ಯೋಜನೆಯ ಬಗ್ಗೆ ದೂರುಗಳು ಬಂದಿವೆ. ಹರ್ ಘರ್ ಜಲ್ ಘೋಷಿಸಿದ ಗ್ರಾಮಗಳಲ್ಲಿ ನಾನು ಪರಿಶೀಲನೆ ಮಾಡಿಸಿದ್ದು, ಬೆರಳೇಣಿಕೆಯ ಗ್ರಾಮಗಳನ್ನು ಹೊರತುಪಡಿಸಿ ಎಲ್ಲ ಕಡೆ ಸಂಪೂರ್ಣ ಕಾಮಗಾರಿಗಳು ಕಳಪೆಯಾಗಿವೆ. ಕೆಲವೊಂದು ಕಡೆ ಒಂದು ಬಾರಿಯೂ ನೀರು ಹರಿಸದೇ ಕಾಮಗಾರಿ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಸಂಬAಧಿಸಿದ ಅಧಿಕಾರಿಗಳ ವಿರುದ್ದ ಕ್ರಮವಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಔರಾದ ತಹಸೀಲ್ದಾರ ಮಹೇಶ ಪಾಟೀಲ, ಕಮಲನಗರ ತಹಸೀಲ್ದಾರ ಅಮಿತ ಕುಲಕರ್ಣಿ, ಔರಾದ ತಾಲ್ಲೂಕು ಪಂಚಾಯತ್ ಇಓ ಕಿರಣ ಪಾಟೀಲ, ಕಮಲನಗರ ಇಓ ಹಣಮಂತರಾಯ ಕೌಟಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
