ಕಮಲನಗರ: ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಸೋಮವಾರ ವಟಸಾವಿತ್ರಿ ವ್ರತವನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಗ್ರಾಮದ ಸುಮಂಗಲೆಯರು ಒಟ್ಟಾಗಿ ಸೇರಿ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಪತಿಯ ದೀರ್ಘಾಯುಷ್ಯ, ಆರೋಗ್ಯ ಮತ್ತು ಕುಟುಂಬದ ಸುಖ-ಸಮೃದ್ಧಿಗಾಗಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರು.
ಸುಮಂಗಲೆಯರು ಸನಾತನ ಸಂಪ್ರದಾಯದಂತೆ ಆಲದ ಮರಕ್ಕೆ ನೂಲಿನ ದಾರವನ್ನು ಸುತ್ತಿ ಪ್ರದಕ್ಷಿಣೆ ಹಾಕಿ, ವಿಶೇಷ ನೈವೇದ್ಯವನ್ನು ಸಮರ್ಪಿಸಿದರು. ಬಳಿಕ ಪರಸ್ಪರ ಉಡಿ ತುಂಬುವ ಸಾಂಪ್ರದಾಯಿಕ ಮಂಗಲ ಕಾರ್ಯವನ್ನು ಭಕ್ತಿಭಾವದಿಂದ ನೆರವೇರಿಸಿದರು.
ಕಾರ್ಯಕ್ರಮ ವಟಸಾವಿತ್ರಿ ವ್ರತದ ಮಹಿಮೆಯ ಕುರಿತು ಸುದೀರ್ಘವಾಗಿ ಮಾತನಾಡಿದ ಉಷಾ ಬಿರಾದಾರ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಪತಿವ್ರತಾ ಶಿರೋಮಣಿ ಸಾವಿತ್ರಿಯ ಕಥೆ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾಗಿದೆ. ತನ್ನ ಅಪ್ರತಿಮ ಭಕ್ತಿ, ಜಾಣ್ಮೆ ಮತ್ತು ದೃಢ ಸಂಕಲ್ಪದಿಂದ ಯಮಧರ್ಮನನ್ನೇ ಒಲಿಸಿ, ಮರಣ ಹೊಂದಿದ್ದ ಪತಿ ಸತ್ಯವಾನನ ಪ್ರಾಣವನ್ನು ಮರಳಿ ಪಡೆದ ಮಹಾನ್ ದಿನವಿದು. ಸಾವಿತ್ರಿ ಯಮನೊಂದಿಗೆ ಹೋರಾಡಿ ತನ್ನ ಪತಿಯ ಜೀವವನ್ನು ಆಲದ ಮರದ ಕೆಳಗೆ ಮರಳಿ ಪಡೆದಿದ್ದರಿಂದಲೇ ಈ ಮರಕ್ಕೆ ವಟಸಾವಿತ್ರಿ ಪೂಜೆಯಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.
ಈ ವ್ರತವನ್ನು ಕೇವಲ ಒಂದು ಆಚರಣೆಯಾಗಿ ಮಾಡದೆ, ಅದರ ಹಿಂದಿನ ಶ್ರದ್ಧೆಯನ್ನು ಅರ್ಥೈಸಿಕೊಳ್ಳಬೇಕು. ಇದು ಕೌಟುಂಬಿಕ ಬಾಂಧವ್ಯವನ್ನು ಗಟ್ಟಿಗೊಳಿಸುವುದಲ್ಲದೆ, ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಮತ್ತು ತ್ಯಾಗದ ಮಹತ್ವವನ್ನು ನಮಗೆ ನೆನಪಿಸುತ್ತದೆ ಎಂದು ವ್ರತದ ಪಾವಿತ್ರ್ಯತೆಯನ್ನು ಸುಂದರವಾಗಿ ವಿವರಿಸಿದರು.
ಸಪ್ನಾ ರಾಂಪುರೆ ಅವರು ಕಾರ್ಯಕ್ರಮದ ಮಹತ್ವ ಮತ್ತು ಪ್ರಕೃತಿ ಆರಾಧನೆಯ ಕುರಿತು ಮಾತನಾಡಿದರು, “ನಮ್ಮ ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ದೈವಸ್ವರೂಪವಾಗಿ ಕಾಣಲಾಗುತ್ತದೆ. ಆಲದ ಮರವು (ವಟವೃಕ್ಷ) ದೀರ್ಘಾಯುಷ್ಯ, ಸ್ಥಿರತೆ ಮತ್ತು ನಿರಂತರ ಬೆಳವಣಿಗೆಯ ಸಂಕೇತವಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ತ್ರಿಮೂರ್ತಿ ಸ್ವರೂಪವಾಗಿರುವ ಈ ವೃಕ್ಷಕ್ಕೆ ದಾರ ಸುತ್ತಿ ಪೂಜಿಸುವುದರಿಂದ ಕುಟುಂಬದಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ.
ವೈಜ್ಞಾನಿಕವಾಗಿಯೂ ಆಲದ ಮರವು ಪರಿಸರಕ್ಕೆ ಅತಿ ಹೆಚ್ಚು ಆಮ್ಲಜನಕವನ್ನು ನೀಡುವ ಮೂಲಕ ಜೀವಕೋಟಿಯನ್ನು ರಕ್ಷಿಸುತ್ತದೆ. ಅಂತಹ ಪವಿತ್ರ ಮರವನ್ನು ಪೂಜಿಸುವ ಮೂಲಕ ನಮ್ಮ ಹಿರಿಯರು ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ನಮಗೆ ನೀಡಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಒಟ್ಟಾಗಿ ಸೇರಿ ಇಂತಹ ಸಂಪ್ರದಾಯಗಳನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ” ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಭಾಗವಹಿಸಿದ್ದ ಹಿರಿಯರಾದ ನೀಲಮ್ಮ ಬಿರಾದಾರ, ಮಲ್ಲಮ್ಮ ಬಿರಾದಾರ ಹಾಗೂ ಪಾರಮ್ಮ ಚಾಂಡೇಶ್ವರೆ ಅವರು ಸಾಂಪ್ರದಾಯಿಕ ಮತ್ತು ಅತ್ಯಂತ ಮಧುರವಾದ ‘ಭೂಲಯಿ’ ಹಾಡುಗಳನ್ನು ಹಾಡುವ ಮೂಲಕ ಹಬ್ಬದ ಧಾರ್ಮಿಕ ಕಳೆಯನ್ನು ಹೆಚ್ಚಿಸಿದರು.
ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಧರಿಸಿ, ಸಕಲ ಮಂಗಲ ದ್ರವ್ಯಗಳೊಂದಿಗೆ ಅತ್ಯಂತ ಉತ್ಸಾಹದಿಂದ ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದು ಇಡೀ ಡಿಗ್ಗಿ ಗ್ರಾಮದಲ್ಲಿ ದೈವೀಕ ಹಾಗೂ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.
ಈ ಸಂದರ್ಭದಲ್ಲಿ ಆಶಾ ಬಿರಾದಾರ, ರಾಣಿ ಶ್ರೀಗಿರೆ, ಶೈಲಜಾ ಬಿರಾದಾರ, ಶೀಲಾ ರಾಂಪುರೆ,ಶಿವನಂದಾ ರಾಂಪುರೆ,ಪ್ರಿಯಾಂಕಾ,
ಸೋನಾಲಿ ಬನವಾಸೆ, ಆರತಿ ಚಾಂಡೇಶ್ವರೆ,
ಸವಿತಾ ರಾಂಪುರೆ, ಸೇವಮ್ಮ ಹೂಗಾರ, ಮಹಾದೇವಿ ಬಿರಾದಾರ, ಲಕ್ಷ್ಮಿಬಾಯಿ ರಾಂಪುರೆ, ನಿರ್ಮಲಾ ರಾಂಪುರೆ,ಸುಗುಣವತಿ, ಚಂದ್ರಕಲಾ ಚಾಂಡೇಶ್ವರೆ ಸೇರಿದಂತೆ ಇನ್ನಿತರ ಇದ್ದರು.
