March 30, 2026

ಔರಾದ್ : ಹಣವಿದ್ದವರೂ ದೊಡ್ಡವರಲ್ಲ ಗುಣವಿದ್ದವರೂ ದೊಡ್ಡವರು ಎಂದು ನಿಷ್ಕಲ ಮಂಟಪ ಬೈಲೂರು ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ರಿ) ಬೀದರ ವತಿಯಿಂದ ನಡೆದ ಅಮರವಾಡಿ ಸಂಸ್ಕೃತಿ ಚಿಂತನ ಹಾಗೂ ಅಮರವಾಡಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿದ ಹಿರಿಯರು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅವರಲ್ಲಿ ಹಣವಿಲ್ಲ ಆದರೆ ಗುಣ ಇಡೀ ಪ್ರಪಂಚವೇ ಮೆಚ್ಚುವಂತಿದೆ.

ಯುವಕರು ಬದುಕನ್ನು ಕೇವಲ ಮನರಂಜನೆಗೆ ಸೀಮಿತ ಮಾಡಿಕೊಂಡು ಮೊಬೈಲ್, ಸಾಮಾಜಿಕ ಜಾಲತಾಣ, ವಾಟ್ಸಪ್‌ಗಳಿಗೆ ಮಾರಿ ಹೋಗಿದ್ದು ದುರಂತ. ಫ್ಯಾಶನ್ ಹೆಸರಲ್ಲಿ ಯುವ ಸಮೂಹ ನಮ್ಮ ನಾಡಿನ ಸಂಸ್ಕೃತಿ ಹಾಳು ಮಾಡುತ್ತಿರುವುದು ಸರಿಯಲ್ಲ.

ಹರಿದ ಬಟ್ಟೆಗಳ ಜೊತೆ ಬದುಕು ಕಟ್ಟಿಕೊಂಡ ಅಂದಿನ ಹಿರಿಯರು ಮತ್ತು ಉದ್ದೇಶಪೂರ್ವಕವಾಗಿ ಹರಿದ ಬಟ್ಟೆಗಳು ಹಾಕಿಕೊಂಡು ಓಡಾಡುತ್ತಿರುವ ಇಂದಿನ ಯುವಕರ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಯಬೇಕಿದೆ.

ಕಾಂಕ್ರೀಟ್ ನಾಡಿಗೆ ಮಹತ್ವ ನೀಡಿ ಕೃಷಿಯನ್ನು ಮರೆತಿದ್ದು ಅಪಾಯಕಾರಿ ನಡೆಯಾಗಿದೆ. ಬಡತನ ಸಿರಿತನದ ವ್ಯತ್ಯಾಸದ ಅರಿಬೇಕು, ಸೌಹಾರ್ದತೆ, ಸಾಮರಸ್ಯದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಬಸವಾದಿ ಶರಣರು ನಿರ್ಮಿಸಿದ ಕಾಯಕ ಪ್ರಧಾನ ಸಮಾಜವೇ ಸುಂದರ ಸಮಾಜ. ಇಂದಿನ ಕಾರ್ಯಕ್ರಮ ಅರ್ಥಪೂರ್ಣ ವಿಚಾರಗಳಿಂದ ಕೂಡಿದ್ದು ಹೆತ್ತವರಿಗೆ ನೀಡುವ ಸಾರ್ಥಕ ಗೌರವ ಇದಾಗಿದೆ ಎಂದರು.

ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿ, ಮೌಲ್ಯಗಳಿಂದ ತುಂಬಿರುವ ಅಂದಿನ ಕಳೆದು ಹೋದ ಜೀವನ ಪುನಃ ಸೃಷ್ಟಿಸುವ ಅಗತ್ಯತೆ ಇದೆ. ನಾವು ಸಂಸ್ಕಾರ, ಸಂಸ್ಕೃತಿ ಮರೆತರೆ ಒಳಿತಲ್ಲ.

ಸಾಮಾನ್ಯರಂತೆ ಬದುಕಿ ಸಾರ್ಥಕ ಜೀವನ ನಡೆಸಿದ ತನ್ನ ತಂದೆ ಭೀಮಗೊಂಡ ಅವರ ಸ್ಮರಣಾರ್ಥ ಅಮರವಾಡಿ ರತ್ನ ಪ್ರಶಸ್ತಿ ನೀಡುತ್ತಿರುವ ಬಾಲಾಜಿ ಹಾಗೂ ಅವರ ಕುಟುಂಬದ ಕಾರ್ಯ ಅನುಕರಣೀಯ. ಇಂದು ನಮ್ಮ ಕಾಲೇಜಿನಲ್ಲಿ ಇಂತಹ ಸ್ಪೂರ್ತಿದಾಯಕ ಕಾರ್ಯಕ್ರಮ ಇಟ್ಟುಕೊಂಡಿದ್ದು ಸಂತಸ ತಂದಿದೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೋಶಾಧ್ಯಕ್ಷ ಡಾ. ಶಿವಶಂಕರ ಟೋಕರೆ, ಮಹಿಳಾಪರ ಚಿಂತಕಿ ಸುನೀತಾ ಮುದ್ದಾ, ಪ್ರಾಚಾರ್ಯ ಎಸ್.ಕೆ ಅಖೀಲ್, ಪ್ರಾಂಶುಪಾಲ ಧನಾಜಿ ರೋಡೆ, ಸಂಸ್ಥೆ ಅಧ್ಯಕ್ಷ ಅಂಜನಾಬಾಯಿ ಉಪಸ್ಥರಿದ್ದರು. ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು.

ಬಾಕ್ಸ್ ಮ್ಯಾಟರ್ : ಪಟ್ಟಣದ ಹಿರಿಯ ಜೀವಿ ಭೀಮಗೊಂಡ ಅಮರವಾಡಿ ಸ್ಮರಣಾರ್ಥ ಜಾನಪದ ಕಲಾವಿದ ಬಸವಣಪ್ಪ ಮುಕ್ತೆದಾರ, ಕೃಷಿ ಕಾರ್ಮಿಕ ನಾಮದೇವ ಆಡೆ, ವಚನ ಸಾಹಿತ್ಯ ಪ್ರಸಾರಕ ಮನ್ಮತಪ್ಪ ಹುಗ್ಗೆ, ಸರ್ವಧರ್ಮ ಸಮಭಾವಿ ನಸೀಮಾ ಬೇಗಂ, ಸಾಹಿತ್ಯಿಕ ಸಾಂಸ್ಕೃತಿಕ ಚಿಂತಕ ಜಗನ್ನಾಥ ಮೂಲಗೆ, ನಾಟಿ ವೈದ್ಯ ಬಸವರಾಜ ಘುಳೆ, ನಿವೃತ್ತ ಸರ್ಕಾರಿ ನೌಕರ ಪಾಂಡುರಂಗ ವಾಘಮಾರೆ ಅವರಿಗೆ ಅಮರವಾಡಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771