
ಬೀದರ:-ಸಾವಿರಾರು ಜನ ದೇಶ ಭಕ್ತರತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಿದ್ದು. ಅವರು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದು ಮಾಜಿ ಸೈನಿಕ ಘಾಳೆಪ್ಪಾ ಒಗ್ಗೆ ಹೇಳಿದರು.
ಅವರು ಶುಕ್ರವಾರ ಸರೋವರ ಸಂರಕ್ಷಣೆ ಧ್ಯೇಯದೊಂದಿಗೆ ಜನವಾಡ ಅಮೃತ ಸರೋವರ ದಡದ ಮೇಲೆ ಆಯೋಜಿಸಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಕಿಯರು ಕೊಳ್ಳೆ ಹೊಡೆದುಕೊಂಡು ಹೋಗಿದ್ದರಿಂದ ಸ್ವತಂತ್ರದ ನಂತರ ದೇಶವು ಸಾಕಷ್ಟು ಆಹಾರ ಭದ್ರತೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಾಕಷ್ಟು ಹಿಂದೆ ಇತ್ತು ಆದರೆ ಈಗ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಬೀದರ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಮಾತನಾಡಿ, ಸುಮಾರು 200 ವರ್ಷಗಳ ಕಾಲ ಬಿಟಿಷರ ದಾಸ್ಯಕ್ಕೆ ಸಿಲುಕಿದ್ದ ಭಾರತವನ್ನು ಸ್ವತಂತ್ರ್ಯ ಗೊಳಿಸುವಲ್ಲಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನವಿದೆ. ಇವರೆಲ್ಲರ ಕೊಡುಗೆಯನ್ನು ಸ್ಮರಿಸುವುದು ನಮ್ಮ ಆಧ್ಯಾ ಕರ್ತವ್ಯವಾಗಿದೆ ಎಂದರು.
ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸುದೇಶ್ ಕೊಡ್ದೆ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದೆ. ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದಗಳಿಸಿದ ಸ್ವಾತಂತ್ರ್ಯ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೈಜಂತಿಬಾಯಿ ಬಿರಾದಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂಜೀವಕುಮಾರ, ಪಿಡಿಓ ಅನಿಲಕುಮಾರ, ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.