
ಔರಾದ : ಕನ್ನಡ ಶಾಲೆಗಳ ರಕ್ಷಣೆ ಹಾಗೂ ಖಾಸಗಿ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಿ ಮತ್ತು ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನರಹಿತ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಮಿನಿ ವಿಧಾನ ಸೌಧದ ಎದುರಿಗೆ ಒಂದು ದಿನದ ಧರಣಿ ನಡೆಸಿದರು.
ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಸೇರಿದ ಅನುದಾನರಹಿತ ಶಾಲೆಗಳ ಶಿಕ್ಷಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಉಳಿಸಿ ಕನ್ನಡ ಬೆಳೆಸಿ ಎಂದು ಘೋಷಣೆ ಕೂಗುತ್ತಾ ತಾಲೂಕು ಪಂಚಾಯತ್, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಪಶು ಆಸ್ಪತ್ರೆ ಮಾರ್ಗವಾಗಿ ಮಿನಿ ವಿಧಾನ ಸೌಧಕ್ಕೆ ತಲುಪಿ ಧರಣಿಯಲ್ಲಿ ನಿರತರಾದರು.
ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ ಅವರು ಮಾತನಾಡಿ ಕಳೆದ 9-10 ವರ್ಷಗಳಿಂದ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿರುವುದಕ್ಕೆ ಕಾರಣ ಸರ್ಕಾರದ ವಿಪರೀತ ಕಠಿಣ ನಿಮಯಗಳು, ಇವುಗಳಿಂದ ಕನ್ನಡ ಶಾಲೆಗಳು, ಅದೇ ರೀತಿಯಾಗಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ವಿಧಿಸುತ್ತಿರುವ ವಿಪರೀತ ಕಠಿಣ ನಿಮಯಗಳಿಂದ ಈ ಶಾಲೆಗಳು ಸೋತು ಸೊರಗುತ್ತಿವೆ. ಇವತ್ತು ನಮ್ಮ ಮಾತೃಭಾಷೆ ಉಳಿಯಬೇಕು, ಕನ್ನಡ ಉಳಿಯಬೇಕು ಅಂದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸ ವಾಗಬೇಕು. ಇದು ಸರ್ಕಾರದ ಮುಖ್ಯ ಧೈಯವಾಗಿರಬೇಕು. ಆದರೆ ದುರದೃಷ್ಟವಶಾತ್ ಇದು ಆಗುತ್ತಿಲ್ಲ. ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿಯಾಗಿದೆ. ಹಲವಾರು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ ಆದ್ದರಿಂದ ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣಹೋಮ ಆಗುತ್ತಿದೆ ಇದನ್ನು ಸರ್ಕಾರ ಮನಗಂಡು ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪೂಜ್ಯ ಶಂಕರಲಿಂಗ ಶಿವಾಚಾರ್ಯರು ಮಾತನಾಡಿ ಕನ್ನಡ ನೆಲದಲ್ಲಿ ಇಲ್ಲಿಯೇ ಜೀವನ ನಡೆಸುತ್ತಿರುವ ಅವುಗಳು ಇಂದು ನಮ್ಮ ಬಿಸಿ ಅಸ್ಮಿತೆಗಾಗಿ ಹೊರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ನಮ್ಮ ಮಾತೃ ಭಾಷೆ ಕನ್ನಡ ಉಳಿದಾಗ ಮಾತ್ರವೇ ನಾವುಗಳು ಉಳಿಯಲು ಸಾಧ್ಯ, ಭಾಷೆ ನಮ್ಮ ತಾಯಿ ಆದರೆ ಇವತ್ತು ತಾಯಿಯ ಉಳಿಕೆಗೆ ಹೋರಾಟ ಮಾಡಲು ಎದ್ದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕು. ಸ್ವಾರ್ಥವನ್ನು ತುಂಬಿಕೊಂಡ ನಮ್ಮ ಜನ ಪ್ರತಿನಿಧಿಗಳು ಕನ್ನಡ ಉಳಿಸಲು ಎಷ್ಟು ಹೋರಾಟ ಮಾಡಿದ್ದಾರೆ ಎನ್ನುವುದು ತಿಳಿದು ಕೊಳ್ಳಬೇಕು. ಎಲ್ಲ ಭಾಷೆಯನ್ನು ಗೌರವಿಸುವ ಸಂಪ್ರದಾಯ ನಮ್ಮದು ಆದರೆ ಇಂದು ಮಾತೃ ಭಾಷೆ ಉಳಿಸಲು ಮುಂದಾಗಬೇಕು, ನಾವು ನಮ್ಮ ಮಕ್ಕಳಿಗೆ ಕನ್ನಡ ಶಾಲೆಗಳಿಗೆ ಸೇರಿಸಿ ನಮ್ಮ ಮನೆಯಿಂದಲೇ ಕನ್ನಡಮಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪರಮೇಶ ವಿಳಾಸಪೂರೆ, ಹಣ್ಮು ಪಾಜಿ, ಅಭಿಷೇಕ್ ಮಠಪತಿ, ಲಕ್ಷ್ಮಣ ಅಚೆಗಾವೆ ಶರಣಪ್ಪ ಪಾಟೀಲ, ನಂದಾದೀಪ ಬೋರಾಳೆ, ಮಾತನಾಡಿದರು.
ಈ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕ ಅನುದಾನರಹಿತ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಔರಾದ ಅಧ್ಯಕ್ಷ ಸಂಜೀವ ಶೆಟಕಾರ, ಕಮಲನಗರ ಅಧ್ಯಕ್ಷ ಸಂಜೀವ ಕಂಟಾಳೆ, ಭೀಮಾಶಂಕರ ಜಿರ್ಗೆ, ಸೂರ್ಯಕಾಂತ ಬಿರಾದಾರ, ಸಂಜು ಬಿರಾದಾರ, ಬಸವರಾಜ ಅಣದೂರೆ, ಅಂಬಾದಾಸ ನಳಗೆ, ಸಂದೀಪ ಪಾಟೀಲ, ಅಮರಸ್ವಾಮಿ ಸ್ಥಾವರಮಠ, ನಾಗನಾಥ ಶಂಕು, ಅನಿಲ ದೇವಕತೆ, ರಾಜಕುಮಾರ ಹಮಿಲಾಪೂರೆ, ಕೃಷ್ಣಾ ಪಾಟೀಲ, ಭಾಗ್ಯಶ್ರೀ ಕೊನಗುತ್ತೆ, ಪೂಜಾ ಬಿರಾದಾರ, ಇಂದುಮತಿ ಎಡವೆ, ಸೇರದಂತೆ ಅನುದಾನರಹಿತ ಹಾಗೂ ಖಾಸಗಿ ಶಾಲಾ ಶಿಕ್ಷಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.