
ಬೀದರ್ : ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುವಾಗ ಹಾಗೂ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಹಾಗೂ ವ್ಯಕ್ತಿಗಳು ಕಂಡುಬಂದರೆ ಸಹಾಯವಾಣಿ 139 ಗೆ ಕರೆ ಮಾಡಿ ಎಂದು ಆರ್‌ಪಿಎಫ್, ಜಿಆರ್‌ಪಿ ಅಥವಾ ರೈಲ್ವೆ ನೌಕರರಿಗೆ ತಕ್ಷಣ ತಿಳಿಸುವಂತೆ ಐಪಿಎಫ್ ಅಧಿಕಾರಿ ಎಂ.ಪ್ರಸಾದ್ ಅವರು ತಿಳಿಸಿದರು.
ಇಂದು ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಗಳನ್ನು ಹಾಗೂ ಕಾಯ್ದಿರಿಸಿದ ಹಾಲ್ ನಲ್ಲಿ ಮತ್ತು ರೈಲುಗಳ ಬೋಗಿಗಳಲ್ಲಿ ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ನಡೆಯಿಸಿ ಅವರು ಮಾತನಾಡಿದರು.
ಪೆಹಲ್ಗಾಮ್‌ನಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಜಾಗೃತಿ ಕಾರ್ಯಕ್ರಮ ಹಾಗೂ ನಡೆಯುತ್ತಿದೆ. ಪ್ರಯಾಣಿಕರ ಜಾಗರೂಕತೆಗಾಗಿ ರೈಲ್ವೆ ರಕ್ಷಣಾ ಪಡೆಯಿಂದ ವಿಧ್ವಂಸಕ ಕೃತ್ಯಗಳ ತಪಾಸಣೆ ನಡೆಸಲಾಗುತ್ತಿದೆ ಎಂದರು.
ದೇಶದಲ್ಲಿನ ಪ್ರಸ್ತುತ ಭದ್ರತಾ ಸನ್ನಿವೇಶದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಹಾಗೆಯೇ ಪ್ರಯಾಣಿಕರು ಎಚ್ಚರಿಕೆಯಿಂದಿರಿ ಮತ್ತು ಸುರಕ್ಷಿತವಾಗಿರಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಎಸ್‌ಐ ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.