
ಔರಾದ:-ಮಾಜಿ ಸಚಿವರು ಹಾಲಿ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ(ಬಿ) ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಡಿ.2ರಂದು ಭೇಟಿ ನೀಡಿದರು.
ಕಾಮಗಾರಿ ಸ್ಥಳದಲ್ಲಿ ಸಂಚರಿಸಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವುದು ತಿಳಿದುಕೊಂಡರು. ಪೂಜೆ ನೆರವೇರಿಸಿ ಎರಡು ತಿಂಗಳು ಕಳೆದರೂ ಇನ್ನೂ ಬುನಾದಿ ಹಂತದ ಕೆಲಸ ನಡೆಯುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ವರ್ಷದ ಮೊದಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪುನಃ ಸಚಿವರಿಂದ ಚಾಲನೆ ನೀಡಲಾಗಿದೆ. ಇಷ್ಟು ದಿನಗಳಾದರೂ ಕೆಲಸ ಏಕೆ ವಿಳಂಬವಾಗಿದೆ ಎಂದು ಬೇಸರ ಹೊರಹಾಕಿದರು.
ಕಟ್ಟಡಗಳ ಅಡಿಪಾಯ ಕೆಲಸ ಚಾಲ್ತಿಯಲ್ಲಿದ್ದು, ಕಲ್ಲು-ಬಂಡೆಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ. ಅಡಿಪಾಯ ಕೆಲಸದ ನಂತರ ಕಾಮಗಾರಿಯ ವೇಗ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ. ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇನ್ನಾದರೂ ಕಾಮಗಾರಿಯ ವೇಗ ಹೆಚ್ಚಿಸಬೇಕು. ಅಂದಾಜು ಪತ್ರಿಕೆಯಲಿರುವಂತೆ ಕೆಲಸವಾಗಬೇಕು. ಆಕಳು, ಎಮ್ಮೆ, ಕುರಿ, ಮೇಕೆ, ಹಂದಿ ಕೋಳಿ ಘಟಕಗಳು ಮತ್ತು ರೈತರ ತರಬೇತಿ ಕೇಂದ್ರಗಳನ್ನು ಸರಿಯಾಗಿ ನಿರ್ಮಿಸಬೇಕು. ಕ್ಯೂರಿಂಗ್ ಸರಿಯಾಗಿ ಆಗಬೇಕು. ಶ್ವಾನ ಘಟಕ ನಿರ್ಮಿಸುವಂತೆ ತಿಳಿಸಿದ್ದೆ, ಈ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ನೀಲನಕ್ಷೆಯೊಂದಿಗೆ ಕಾಮಗಾರಿಯ ಕುರಿತು ವಿವರಿಸಿದರು.
ನಂತರ ಶಾಸಕರು ಮಾತನಾಡಿ, ಬಹಳಷ್ಟು ಶ್ರಮ ವಹಿಸಿ ತಾಲ್ಲೂಕಿಗೆ ಯೋಜನೆಯನ್ನು ತಂದಿದ್ದೇನೆ. ಸುಮಾರು 34 ಎಕರೆ ನಿವೇಶನದಲ್ಲಿ 34.49 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಮೊದಲ ಜಾನುವಾರು ತಳಿ ಸಂವರ್ಧನಾ ಕೇಂದ್ರ ಹೆಡಗಾಪೂರನಲ್ಲಿ ನಿರ್ಮಾಣವಾಗುತ್ತಿದೆ. ರೈತರಿಗೆ ಅನುಕೂಲಕರವಾಗಿರುವ ಕಾಮಗಾರಿ ಗುಣಮಟ್ಟದಿಂದ ಆಗಬೇಕು. ನಾನು ಪ್ರತಿ ತಿಂಗಳು ಆಗಮಿಸಿ ಕೆಲಸವನ್ನು ಪರಿಶೀಲಿಸುತ್ತೇನೆ. ಏನಾದರೂ ಲೋಪದೋಷಗಳು ಕಾಣಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಅನುಷ್ಠಾನ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳದಲ್ಲಿದ್ದು ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರೂ ಕೂಡ ಸ್ಥಳಕ್ಕೆ ಭೇಟಿ ನೀಡುತ್ತಿರಬೇಕು ಎಂದು ಸೂಚಿಸಿದರು.
*ರಸ್ತೆ ನಿರ್ಮಿಸಿಕೊಡಲು ಸೂಚನೆ* : ಜಾನುವಾರು ತಳಿ ಸಂವರ್ಧನಾ ಕೇಂದ್ರ ನಿರ್ಮಿಸುತ್ತಿರುವುದರಿಂದ ಕೃಷಿ ಜಮೀನುಗಳಿಗೆ ಹೋಗುವ ರಸ್ತೆ ಮುಚ್ಚಿ ಹೋಗಿದ್ದು, ಸುತ್ತಲಿನ ಅನೇಕ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮದ ರೈತರು ಶಾಸಕರ ಬಳಿ ಸಮಸ್ಯೆ ಹಂಚಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡಬೇಕೆಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಯಾವುದಾದರೂ ಯೋಜನೆಯಡಿ ಒಳ್ಳೆಯ ರಸ್ತೆ ನಿರ್ಮಿಸಿಕೊಡುತ್ತೇನೆ. ಅಲ್ಲಿಯವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು. ರೈತರ ಅನುಕೂಲಕ್ಕಾಗಿಯೇ ತಳಿ ಸಂವರ್ಧನಾ ಕೇಂದ್ರ ನಿರ್ಮಿಸುತ್ತಿದ್ದೇನೆ. ನಾನು ಸದಾ ರೈತರ ಪರವಾಗಿದ್ದು, ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಲು ಬಿಡುವುದಿಲ್ಲ. ರೈತರ ಹಿತದೃಷ್ಟಿಯೇ ನನ್ನ ಮೊದಲ ಆದ್ಯತೆ ಎಂದರು.
ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕುಮಾರ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಫಾಹೀಮ್ ಖುರೇಷಿ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶ್ರೀಮಂತ ಪಾಟೀಲ, ಕೇರಬಾ ಪವಾರ, ಶಿವರಾಜ ಅಲ್ಮಾಜೆ, ಸಂಜು ವಡೆಯರ್, ಶಿವಲಿಂಗ ಚಿಟ್ಟಾ, ಮಹಾದೇವ ಕುಣಿಕೇರಿ, ಶಿವಕುಮಾರ ಪಾಂಚಾಳ, ಗಂಗಾರೆಡ್ಡಿ ನಾಗೂರ, ಬಾಲಾಜಿ ಮೇತ್ರೆ, ರಮೇಶ ಗೌಡಾ, ರಾಜಕುಮಾರ ಸೋರಾಳೆ ಸೇರಿದಂತೆ ಇತರರಿದ್ದರು.