
ಬೀದರ: ಕಲೆ ಮತ್ತು ವಾಸ್ತುಶಿಲ್ಪ (ಆರ್ಕಿಟೆಕ್ಚರ್) ಕುರಿತು ಬೀದರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಅಯೋಜನೆ ಮಾಡಲಾಗಿದೆ. ಪರಿಸರ ಸ್ನೇಹಿ ವಾಸ್ತುಶಿಲ್ಪ, ನಗರಾಭಿವೃದ್ಧಿ ಮಾಡುವಲ್ಲಿ ವಾಸ್ತುಶಿಲ್ಪಿಗಳ ಪಾತ್ರವೇನು ಎಂಬಿತ್ಯಾದಿ ವಿಷಯಗಳ ಕುರಿತು ಪ್ರಥಮ ಬಾರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಆರ್ಕಿಟೆಕ್ಚರ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ ತಿಳಿಸಿದರು.
ನಗರದ ಎಸ್.ಆರ್.ಎಸ್. ಸಭಾಂಗಣದಲ್ಲಿ ಪ್ರಥಮ “ವಿಶ್ವ ಆರ್ಕಿಟೆಕ್ಚರ್ ದಿನಾಚರಣೆ” ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಾಸ್ತುಶಿಲ್ಪ ಕಲೆಯಲ್ಲಿ ನಾಟಾ ಎಂದು ಒಂದು ವಿಷಯವಿದೆ. ಇದರ ಬಗ್ಗೆ ಬಹುತೇಕ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಮಕ್ಕಳು ತಿಳಿದುಕೊಂಡಾಗ ಮುಂದೆ ಈ ಕುರಿತು ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಸದ್ಯ ಬೀದರನಲ್ಲಿ ೩೩ ಜನ ಆರ್ಕಿಟೆಕ್ಚರ್ ಇದ್ದೇವೆ. ಎಲ್ಲರೂ ಸೇರಿ ಒಂದು ಸಂಸ್ಥೆ ಕಟ್ಟಿ ಮುಂದಿನ ಯುವಪೀಳಿಗೆಗೆ ಇದರ ಅಧ್ಯಯನ ಕುರಿತು ಜಿಲ್ಲೆಯ ಪ್ರತೀ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪಾಟೀಲ ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಆರ್ಕಿಟೆಕ್ಚರ್ ಸಂತೋಷಕುಮಾರ ಸುಂಕದ್ ಮಾತನಾಡಿ ಇಂದಿನ ಕಾಲದಲ್ಲಿ ಸಿಮೆಂಟ್ ಕಾಂಕ್ರಿಟ್ ಸೇರಿದಂತೆ ಇನ್ನಿತರ ಪದಾರ್ಥಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಕಟ್ಟಡ ನಿರ್ಮಾಣದ ಪದಾರ್ಥಗಳು ಪದೇ ಪದೇ ಹೊಸದಾಗಿ ತಯಾರಿ ಮಾಡುವುದಕ್ಕಿಂತ ಈಗಾಗಲೇ ಬಳಸಿದ ವಸ್ತುಗಳೇ ಪುನರ್ಬಳಕೆ ಮಾಡುವುದು ಹೇಗೆ? ಯಾವ ರೀತಿ ಆರ್ಕಿಟೆಕ್ಚರ್ ಮೂಲಕ ಪ್ರಕೃತಿಗೆ ಕಾಣಿಕೆ ಕೊಡಬಹುದು ಎಂಬ ಕುರಿತು ವಿಚಾರ ಮಾಡಲಾಗುತ್ತಿದೆ. ಆರ್ಕಿಟೆಕ್ಚರ್ ಎಂದರೆ ಕೇವಲ ಸೌಂದರ್ಯವಲ್ಲ. ಬದಲಾಗಿ ಆರ್ಟ್ ಮತ್ತು ಟೆಕ್ನಾಲಜಿ ಮೂಲಕ ಪ್ರಕೃತಿ ಉಳಿಸಿಕೊಳ್ಳುವುದರ ಜೊತೆಗೆ ಹೊಸ ಹೊಸ ವಿನ್ಯಾಸ ಮಾಡುವುದು ಹೇಗೆ ಎಂಬ ಕುರಿತು ಇಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸAಸ್ಥೆಯ ಉಪಾಧ್ಯಕ್ಷೆ ಆರ್ಕಿಟೆಕ್ಚರ್ ಸುಪ್ರಿಯಾ ಕಾಮಣ್ಣ ಮಾತನಾಡಿ ಇಂದು ಪ್ರೌಢ ಶಾಲಾ ಮಕ್ಕಳಿಗಾಗಿ ಆರ್ಕಿಟೆಕ್ಚರ್ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪಾಲಕರು ಮತ್ತು ಶಿಕ್ಷಕರಿಗಾಗಿಯೂ ಜಾಗೃತಿ ಮೂಡಿಸಲು ಪ್ರತಿಯೊಂದು ಶಾಲಾ ಕಾಲೇಜುಗಳಿಗೆ ತೆರಳಲಿದ್ದೇವೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಅನೀಲ ಖೇಣಿ, ಗೌರವ ಕಾರ್ಯದರ್ಶಿ ಶರಣ್ ಎಖೆಳ್ಳಿ, ಸದಸ್ಯರಾದ ಸುಮಿತ್ ಸಿದ್ರಾಮಶೆಟ್ಟಿ, ಸಂಕೇತ್, ರಾಹುಲ್ ಪಾಟೀಲ, ಸೌಂದರ್ಯ ದುರ್ಗೆ, ನೇಹಾ ಪಾಟೀಲ, ರಿಶಿಕೇಶ್ ಜೋಶಿ, ರಾಘವೇಂದ್ರ ಚಾರಿ, ವೈಷ್ಣವಿ ಹೊಸಳ್ಳೆ, ಅವಿನಾಶ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.