ಔರಾದ್ : ಔರಾದ್ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಮನ್ಮತ ಡೋಳೆ ಅವರಿಗೆ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಸದಸ್ಯರು, ಸಾಹಿತಿಗಳು, ಚಿಂತಕರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಹೋರಾಟಗಾರರು ಡೋಳೆ ಅವರಿಗೆ ಶಾಲು ಹೊದಿಸಿ ಗೌರವಿಸಿ, ಆಮಂತ್ರಣ ಪತ್ರಿಕೆಯನ್ನು ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಕನ್ನಡವನ್ನು ಬದುಕಿನ ಭಾಗವಾಗಿಸಿಕೊಂಡ ಗಡಿಭಾಗ ಔರಾದ್ ತಾಲ್ಲೂಕಿನ ಜನರು ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಉಲ್ಲಾಸದಿಂದ ಮಾಡುತ್ತಿರುವುದು ಖುಷಿ ನೀಡಿದೆ.
ಸಮ್ಮೇಳನದ ಪ್ರಚಾರ ಜಿಲ್ಲೆಯಾದ್ಯಂತ ನಡೆಯುತ್ತಲಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಅಭಿಮಾನ ಪಟ್ಟರು. ಜಿಲ್ಲಾ ಸಮ್ಮೇಳನ ಮಾದರಿಯಲ್ಲಿ ತಯಾರಿ ನಡೆಯುತ್ತಿರುವುದು ಇಲ್ಲಿಯ ಯುವಕರ ಉತ್ಸಾಹ ತೋರುತ್ತದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಸಮ್ಮೇಳನದ ಸಿದ್ಧತೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಭಾವಪರವಶರಾಗಿ ಮಾತನಾಡಿದ ಡಾ. ಮನ್ಮತ ಡೋಳೆ ತನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ವೈಜಿನಾಥ ಬುಟ್ಟೆ, ಜಗನ್ನಾಥ ಮೂಲಗೆ, ಶಾಲಿವಾನ ಉದಗಿರೆ, ಜಗನ್ನಾಥ ದೇಶಮುಖ, ಅನೀಲಕುಮಾರ ಕಟ್ಟೆ, ಮಲ್ಲಿಕಾರ್ಜುನ ಟಂಕಸಾಲೆ, ಗಜಾನನ ಮಳ್ಳಾ, ಹಣಮಂತ ಪಾಟೀಲ್, ವಿಶ್ವನಾಥ ಬಿರಾದಾರ ಅಮೃತರಾವ ಬಿರಾದಾರ, ಎಂ.ಡಿ ಸಾಜೀದ್, ಸಂಜೀವ ಶಟಕಾರ, ಬಸವರಾಜ ಹಳ್ಳೆ, ಮಾಣಿಕರಾವ ಡೋಳೆ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಅಶೋಕ ಶೆಂಬೆಳ್ಳೆ, ಗೋವಿಂದ ಪಾಟೀಲ್, ಅಂಬಾದಾಸ ನಳಗೆ, ಮಮತಾ ಬಿ. ಮೀಸೆ, ಶಾಂತಮ್ಮ ಸೇರಿದಂತೆ ಇನ್ನಿತರರಿದ್ದರು.
