July 20, 2025

ಕಮಲನಗರ : ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಅಧ್ಯಕ್ಷ ಶಿವಕುಮಾರ ಬಿರಾದಾರ ಅವರ ನೇತೃತ್ವದಲ್ಲಿ ಗುರುವಾರ ತಸಿಲ್ ಕಚೇರಿಗೆ ತೆರಳಿ ಕಂದಾಯ ಸಚಿವರಿಗೆ ಬರೆದ ಮನವಿ ಪತ್ರ ತಸಿಲ್ದಾರ ಅಮಿತಕುಮಾರ ಕುಲಕರ್ಣಿಯವರಿಗೆ ಸಲ್ಲಿಸಿದರು .

ಬಳಿಕ ಅವರು ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್ ಟಾಪ್ ಅದಕ್ಕೆ ಅವಶ್ಯವಿರುವ ಇಂಟರ್ ನೆಟ್ ಹಾಗೂ ಸ್ಕ್ಯಾನರ್‍ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದರು.

ಆಧುನಿಕ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅವಶ್ಯಕವಾಗಿರುವ ಸೌಲಭ್ಯವನ್ನು ಕಲ್ಪಿಸುವವರೆಗೆ ಸೆ.26ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹ್ಕಕುಪತ್ರ, ಸಮೂನೆ 1-5 ವೆಬ್ ಆಪ್ಲಿಕೇಶನ್ ಮತ್ತು ಪೌತಿ ಆಂದೋಲನ ಆಯಾಪ್ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಪದನ್ನೋತಿ ವರ್ಗಾವಣೆ, ನೌಕರರ ಅಮಾನತ್ತು ಸೇರಿ ಒಟ್ಟು 34 ಮೂಲಸೌಲಭ್ಯಗಳು ಕಲ್ಪಿಸುವಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು ಅವುಗಳಿಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ನಮ್ಮೇಲ್ಲರ ನ್ಯಾಯಯುತ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿ, ಕೂಡಲೇ ತಮ್ಮ ಬೇಡಿಕೆ ಪತ್ರ ಕಂದಾಯ ಸಚಿವ ಮಾನ್ಯ ಶ್ರೀ ಕೃಷ್ಣ ಭೈರೆಗೌಡ ಅವರ ಕಚೇರಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿಗಳಾದ ಲೋಕೇಶ ಪಿಸೋಳೆ, ಪ್ರವೀಣ ಬಿರಾದಾರ, ಮಹೇಶ ಕಳಸೆ, ಮಂಜುನಾಥ, ರಮೇಶ, ಮಲ್ಲಪ್ಪ, ನಿಂಗಪ್ಪಾ, ಅನೀಲ, ಸುಧೀರ, ಇಮಾಮ್, ವಿಠ್ಠಲ, ವೀರು, ಆಕಾಶ, ತುಳಸಿರಾಮ, ಲಕ್ಷ್ಮಣ, ಚೈತ್ರಾ ಇದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771