ಔರಾದ್ : ಆಂಗ್ಲ ಮಾಧ್ಯಮ ಶಿಕ್ಷಣ ಪಡೆದ ಮಕ್ಕಳಿಗೆ ನಮ್ಮ ನೆಲಮೂಲ ಸಂಸ್ಕೃತಿಯ ಪರಿಚಯ ಇಲ್ಲವಾಗುತ್ತಿದೆ ಎಂದು ಹಣೆಗಾಂವ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಆದರ್ಶ ಕಾಲೋನಿ ಸ್ಥಾವರಮಠ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದಿಂದ ನಕುಲ್ ಸ್ಥಾವರಮಠ ಮಗುವಿನ ಜನ್ಮದಿನದ ನಿಮಿತ್ತ ಆಯೋಜಿಸಿದ ಕನ್ನಡ ಅರಿವು- ಆಚಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಾಡು ನುಡಿ ಬಗ್ಗೆ ಅಭಿಮಾನ ಇಟ್ಟುಕೊಂಡು ತತ್ವ ಸಿದ್ದಾಂತಗಳಿಗೆ ಗೌರವಿಸಿ ಬದುಕುವುದನ್ನು ಕಲಿಸುವ ಕೆಲಸ ಪಾಲಕರು, ಗುರುಗಳು ಮಾಡಬೇಕಿದೆ ಪ್ರಸ್ತುತ ಆಂಗ್ಲ ಭಾಷೆಯ ಅವಶ್ಯಕತೆ ಇದ್ದರೂ ಸಹ ಮಾತೃಭಾಷೆ ಕನ್ನಡ ಮರೆಯುವಂತಿಲ್ಲ ಎಂದರು.
ಸಿಪಿಐ ರಘುವೀರಸಿಂಗ್ ಠಾಕೂರ ಮಾತನಾಡಿ, ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಹಾಗೂ ಗಡಿ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿ, ಇತಿಹಾಸವನ್ನು ಮನೆ ಮನೆಗಳಿಗೆ ತಲುಪಿಸುತ್ತಿರುವ ಪರಿಷತ್ ಕಾರ್ಯ ಅಭಿನಂದನಾರ್ಹ. ಇದರಿಂದ ಮಕ್ಕಳಲ್ಲಿ ಜೀವನ ಮೌಲ್ಯಗಳ ಬಿತ್ತನೆ ಸಾಧ್ಯವಾಗುತ್ತದೆ ಎಂದರು.
ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, ಪತಿಷತ್ತು ಮನೆ ಮನೆಗೆ ಮನ ಮನಕ್ಕೆ ಕನ್ನಡದ ಘಮಲು ತಲುಪಿಸುವ ಉದ್ದೇಶದಿಂದ ಇಂತಹ ಪ್ರಯೋಗಗಳಿಗೆ ಮುಂದಾಗಿದೆ ಎಂದರು. ಅಮರಸಸ್ವಾಮಿ ಸ್ಥಾವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜ ದೇಶಮುಖ, ಕಲ್ಲಪ್ಪ ದೇಶಮುಖ, ಸೋಪಾನರಾವ ಡೊಂಗರೆ ಉಪಸ್ಥಿತರಿದ್ದರು.
ಸಾಧಕರಾದ ಗುರುನಾಥ ದೇಶಮುಖ, ರವಿಕಾಂತ ಬಂಬಳಗೆ, ದತ್ತಾತ್ರೇಯ ಹಾವರ್ಗೆ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಆಯೋಜಿಸಿದ ಮಾಣಿಕೇಶ್ವರಿ ಶಿವಕುಮಾರ ದಂಪತಿಗಳಿಗೆ ಪರಿಷತ್ತಿನಿಂದ ಗೌರವಿಸಿ ನಕುಲ್ ಸ್ಥಾವರಮಠ ಮಗುವಿನ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಂಬಾದಾಸ ನಳಗೆ, ಆನಂದ ದ್ಯಾಡೆ, ಅನೀಲ ಮೇತ್ರೆ, ಸಂತೋಷ ಚಾಂಡೇಶ್ವರೆ, ಬಸವ ಚೌಕಂಪಳ್ಳೆ, ಸಂತೋಷ ಫುಲಾರಿ ಸೇರಿದಂತೆ ಇನ್ನಿತರರಿದ್ದರು.
