ಔರಾದ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ ಅವರು ಶುಕ್ರವಾರ ತಾಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ ವಿಕಸಿತ ಭಾರತ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ (ಕಾಂಟೂರ್ ಟ್ರೆಂಚ್) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ವಿಬಿ-ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗುವ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ವಲಸೆ ಹೋಗದೆ, ನಿಮ್ಮೂರಲ್ಲೇ ಕೆಲಸ ಮಾಡಿ:
ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವ ಅಗತ್ಯವಿಲ್ಲ. ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ನಿಮ್ಮೂರಲ್ಲೇ ಸಾಕಷ್ಟು ಕೆಲಸದ ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ದಿನಗೂಲಿ ಮೊತ್ತವನ್ನು ರೂ.370ರಿಂದ ರೂ.382ಕ್ಕೆ ಹೆಚ್ಚಿಸಲಾಗಿದೆ. ವಾರ್ಷಿಕ ಉದ್ಯೋಗಾವಕಾಶವನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದ್ದು, ಗ್ರಾಮೀಣ್ ರೋಜ್ ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವ ಕುಟುಂಬವು ವರ್ಷಕ್ಕೆ ರೂ.47,750ರವರೆಗೆ ಆದಾಯ ಗಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ವಿಬಿ ಜಿ ರಾಮ್ ಜಿ ಯೋಜನೆಯಡಿ ಹೆಚ್ಚು ಮಾನವ ದಿನಗಳ ಸೃಜನೆಗೆ ಒತ್ತು ನೀಡಬೇಕು. ಅರ್ಹ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಯೋಜನೆಯ ಸೌಲಭ್ಯಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಕೂಲಿಕಾರ್ಮಿಕರಿಗೆ ಬಾಳೆಹಣ್ಣು ವಿತರಿಸಿದ ಸಿಇಒ
ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಿಇಒ ಅವರು, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕೂಲಿಕಾರ್ಮಿಕರಿಗೆ ಬಾಳೆಹಣ್ಣುಗಳನ್ನು ವಿತರಿಸಿ,
ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ(ಆಡಳಿತ) ಜಯಪ್ರಕಾಶ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ(ಗ್ರಾ.ಉ)ಶಿವಕುಮಾರ ಘಾಟೆ, ಎಡಿಪಿಸಿ ದೀಪಕ ಕಡಿಮನಿ, ಗ್ರಾಮ ಪಂಚಾಯತ್ ಪಿಡಿಒ ನಂದಕಿಶೋರ, ತ್ರಾಂತಿಕ ಸಂಯೋಜಕ ಆನಂದ ಕಾಳಗಾಪೂರೆ, ತಾಂತ್ರಿಕ ಸಹಾಯಕ ಶರಣಪ್ಪ, ಐಇಸಿ ಅಂಬಾದಾಸ ಪಾಟೀಲ್, ಗ್ರಾಪಂ ಸಿಬ್ಬಂದಿಯವರು ಹಾಗೂ ಕೂಲಿಕಾರ್ಮಿಕರು ಹಾಜರಿದ್ದರು.
