September 8, 2025

ಬೀದರ: ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಬಹುಮುಖ್ಯವಾಗಿದ್ದು ಈ ರೋಗದ ಲಕ್ಷಣಗಳು ಕಂಡುಬAದಲ್ಲಿ ಸಮಿಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗೂಡೆ ತಿಳಿಸಿದರು.
ಅವರು ಇಂದು ನಗರದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ-2025ರ ನಿಮಿತ್ಯ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜನರಲ್ಲಿ ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಅಭಿಯಾನಕ್ಕೆ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ವರ್ಷದ ಧ್ಯೇಯವಾಕ್ಯ ”ವಿಶಿಷ್ಟತೆಯಿಂದ ಏಕತೆ” ಎಂದು ತಿಳಿಸುತ್ತಾ ಪ್ರತಿ ವರ್ಷದಂತೆ ಈ ವರ್ಷವು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಜಿಲ್ಲಾದ್ಯಾಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಫೆಬ್ರವರಿ 4 ರಂದು ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕ್ಯಾನ್ಸರ್ ಪೂರ್ವಭಾವಿ ತಪಾಸಣಾ ಶಿಬಿರಗಳನ್ನು, ಅರಿವು ಮೂಡಿಸುವ ಮಾಹಿತಿ, ಶಿಕ್ಷಣ ಕುರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಈ ದಿನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪಾ ಬೊಮ್ಮ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಜನರಲ್ಲಿ ಭಯದ ಬದಲು ರೋಗದ ಅರಿವು ತುಂಬಾ ಮುಖ್ಯವಾಗಿದ್ದು, ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಆದಿ ಮುಖ್ಯ ಕಾರಣಗಳಾಗಿದ್ದು. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ಥನ ಮತ್ತು ಗರ್ಭಕಂಠವು ಕ್ಯಾನ್ಸರನ ಪ್ರಮುಖ ತಾಣಗಳಾಗಿವೆ, ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಜೊತೆಗೆ 30 ವರ್ಷ ಮೇಲ್ಪಟ್ಟವರು ಪ್ರತಿ 5 ವರ್ಷಕ್ಕೊಮ್ಮೆ ಪುರುಷರು ಬಾಯಿಕ್ಯಾನ್ಸರ್ ಹಾಗೂ ಮಹಿಳೆಯು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್‌ಗಳ ಪೂರ್ವಭಾವಿ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದೆಂದು ತಿಳಿಸಿದರು.
ಈ ಜಾಗೃತಿ ಅಭಿಯಾನವು ಇಂಡಿಯನ್ ಕ್ಯಾನ್ಸರ್ ಸೊಸೈಟಿ(ಕರ್ನಾಟಕ)ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ ಎಲ್ ಮತ್ತು ಟಿ ಟೆಕ್ನಾಲಾಜಿ ಸರ್ವಿಸೆಸ್ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಬೀದರನಿಂದ ಪ್ರಾರಂಭವಾಗಿ ಜನವಾಡ ರಸ್ತೆ ಮಾರ್ಗವಾಗಿ ಅಂಬೇಟ್ಕರ್ ವೃತ್ತದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಮುಕ್ತಾಯಗೊಳಿಸಲಾಯಿತು. ಅಭಿಯಾನದುದ್ದಕ್ಕೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಫಲಕಗಳು, ಘೋಷಣೆಗಳು ಹಾಗೂ ಧ್ವನಿವರ್ಧಕಗಳ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು.
ಈ ಅಭಿಯಾನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ(ಕರ್ನಾಟಕ)ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ ಎಲ್ ಮತ್ತು ಟಿ ಟೆಕ್ನಾಲಾಜಿ ಸರ್ವಿಸೆಸ್ ಇದರ ಪ್ರಾದೇಶಿಕ ಕಾರ್ಯವ್ಯವಸ್ಥಾಪಕ ಗುರುರಾಜ ಕುಲಕರ್ಣಿ, ಎಸ್.ಬಿ ಪಾಟೀಲ್ ದಂತ ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲರು ಡಾ.ಚಂದ್ರಶೇಖರ ಗೌಡಾ ಪಾಟೀಲ್ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಸಿದ್ದಾರಾಮೇಶ್ವರ ಆಯುರ್ವೇದಿಕ್ ವೈದ್ಯಾಕೀಯ ಕಾಲೇಜ, ಸರಕಾರಿ ನರ್ಸಿಂಗ್ ಕಾಲೇಜ್ ಬ್ರಿಮ್ಸ್ ಬೀದರ, ವಸಂತ ನರ್ಸಿಂಗ್ ಕಾಲೇಜ್ ನೌಬಾದ ಹಾಗೂ ಗುರುನಾನಕ್ ನರ್ಸಿಂಗ್ ಕಾಲೇಜ್ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ. ಕಿರಣ ಪಾಟೀಲ್ ಮತ್ತು ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಡಾ.ಸುಲೋಚನಾ, ಜಿಲ್ಲಾ ಎನ್.ಸಿ.ಡಿ.ಕಾರ್ಯಕ್ರಮ ಸಂಯೋಜಕರು ಡಾ.ವೀರೇಶ ಬಿರಾದರ, ಜಿಲ್ಲಾ ಎಫ್.ಎಲ್.ಸಿ. ಪ್ರವೀಣ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಿಬ್ಬಂದಿ ವರ್ಗದವರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಂಗಮೇಶ ಕಾಂಬ್ಲೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸಂಚಾಲಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771