
ಬೀದರ: ಬೀದರ ಜಿಲ್ಲೆಯ ಚಟ್ನಳ್ಳಿ ಮತ್ತು ಧರ್ಮಾಪುರ ಗ್ರಾಮಗಳ ನೂರಾರು ರೈತರು ವಿಜಯಪುರಕ್ಕೆ ಆಗಮಿಸಿದ ವಕ್ಫ್ ವಿಧೇಯಕ ಕುರಿತ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೆ ಈಶ್ವರಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು. ಬೀದರನಿಂದ ವಿಜಯಪುರಕ್ಕೆ ಹೋಗಿದ್ದ ನೂರಾರು ರೈತರು ವಕ್ಫ್ ಮಂಡಳಿ ವ್ಯವಸ್ಥಿತವಾಗಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದೆ. ನೊಟೀಸ್ ವಾಪಸ್ ಪಡೆಯುವುದಾಗಿ ಹೇಳುವ ಸರ್ಕಾರ ದಾಖಲೆಗಳಲ್ಲಿ ಆಕ್ರಮವಾಗಿ ಸೇರ್ಪಡೆ ಮಾಡಿರುವ ವಕ್ಫ್ ಹೆಸರು ತೆಗೆದು ಹಾಕುವ ಕೆಲಸ ಮಾಡುತ್ತಿಲ್ಲ. ನೀವೇ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಪತ್ರದಲ್ಲಿ ರೈತರು ತಿಳಿಸಿದ್ದಾರೆ.
ಈ ಕುರಿತು ಜೆಪಿಸಿ ಅಧ್ಯಕ್ಷರ ಮುಂದೆ ಮಾತನಾಡಿದ ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ಸಿಎಂ ಸಿದ್ಧರಾಮಯ್ಯ ಅವರು ಮುಸ್ಲಿಂ ತುಷ್ಟಿಕರಣ ನೀತಿ ಅನುಸರಿಸಲು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಮುಖಾಂತರ ಹಿಂದೂಗಳ ಮಠಮಾನ್ಯಗಳ ಆಸ್ತಿಗಳನ್ನು ಕಬಳಿಸಲು ನಡೆಸುತ್ತಿರುವ ಹುನ್ನಾರವನ್ನು ನಾವು ಖಂಡಿಸುತ್ತೇವೆ. ಅಹಿಂದ ಎಂದು ಹೇಳುವ ಸಿಎಂ ಅವರು ಎಲ್ಲಾ ವರ್ಗದ ರೈತರ ಜಮೀನಿನ ಮೇಲೆ ಹಣ್ಣು ಹಾಕಿ ಬೀದಿಗೆ ತಳ್ಳುವ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದರು.
ರೈತರಿಗೆ ಭರವಸೆ ನೀಡಿದ ವಕ್ಫ್ ವಿಧೇಯಕ ಕುರಿತ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಮಾತನಾಡುತ್ತ ಕರ್ನಾಟಕ ರಾಜ್ಯದ ಜಿಲ್ಲಾವಾರು ಪ್ರಮುಖರಿಗೆ ಜಂಟಿ ಸಂಸದೀಯ ಪೂರ್ಣ ಸಮಿತಿ ಮುಂದೆ ಮಾತನಾಡಲು ಅವಕಾಶ ಮಾಡಿಕೊಡುತ್ತೇನೆ ಎಂದರು. ಜಂಟಿ ಸಂಸದೀಯ ಸಮಿತಿ ಸದಸ್ಯ ತೇಜಸ್ವಿ ಸೂರ್ಯ ಅವರು ಜಿಲ್ಲೆಯ ರೈತರ ಸಮಸ್ಯೆಗಳನ್ನು ಸಮಿತಿ ಮುಂದೆ ಪ್ರಾಮಾಣಿಕವಾಗಿ ಇಡುತ್ತೇನೆ ಎಂದು ಭರವಸೆ ನೀಡಿದರು.
ಮನವಿ ಸಲ್ಲಿಸುವ ವೇಳೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಸ್.ಕೆ.ಬೆಳ್ಳುಬ್ಬಿ, ರಮೆಶ ಜಾರಕಿಹೊಳಿ, ಬಿ.ಪಿ.ಹರೀಶ ಹಾಗೂ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಬೀದರ ತಾಲೂಕಿನ ಚಟನಳ್ಳಿ ಹಾಗೂ ಧರ್ಮಾಪುರ ಗ್ರಾಮದ ನೂರಾರು ರೈತರು ಹಾಜರಿದ್ದರು.