
*ಕನಕಗಿರಿ*: ಕಲ್ಯಾಣ ಕರ್ನಾಟಕದಲ್ಲಿ ದ್ವೀತೀಯ ಬಾರಿಗೆ ತಾಲೂಕಿನ ಸೂಳೆಕಲ್ ಗ್ರಾ.ಪಂಚಾಯಿತಿಯ ವ್ಯಾಪ್ತಿಯ ಬೆನಕನಾಳ್ ಗ್ರಾಮದಲ್ಲಿ ಪುಸ್ತಕದ ಗೂಡನ್ನು ಲೋಕಾರ್ಪಣೆ ಮಾಡಲಾಗಿದೆ. ಓದುಗರು ಇದರ ಸದುಪಯೋಗ ಪಡೆಯಲು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಅವರು ಹೇಳಿದರು.
ತಾಲೂಕಿನ ಸೂಳೆಕಲ್ ಗ್ರಾಮ ಪಂಚಾಯಿತಿಯ ಬೆನಕನಾಳ್ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಅಗಸಿ ಕಟ್ಟೆಯ ಆವರಣದಲ್ಲಿ ಗ್ರಾ.ಪಂ ವತಿಯಿಂದ ಪುಸ್ತಕದ ಗೂಡು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿಯೇ ಮೊದಲು ಪುಸ್ತಕ ಗೂಡು ತಾಲ್ಲೂಕಿನ ಚಿಕ್ಕಮಾದಿನಾಳ ಗ್ರಾ.ಪಂಚಾಯಿತಿಯಲ್ಲಿ ಉದ್ಘಾಟಿಸಿದ್ದು, ಎರಡನೇ ಪುಸ್ತಕಗೂಡು ಕಾರ್ಯಕ್ರಮವನ್ನು ಬೆನಕನಾಳ್ ಗ್ರಾಮದಲ್ಲಿ ಉದ್ಘಾಟಿಸುತ್ತಿರುವುದು ಓದುಗರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶವನ್ನು ಹೊಂದಿದೆ. ಈಗಾಗಲೇ ಸೂಳೆಕಲ್ ಗ್ರಾಮದಲ್ಲಿ ಗ್ರಂಥಾಲಯ ಇರುವುದುರಿಂದ ಗ್ರಂಥಾಲಯವಿಲ್ಲದ ಗ್ರಾಮಗಳಲ್ಲಿ ಪುಟ್ಟ ಗ್ರಂಥಾಲಯದ ಮಾದರಿಯಲ್ಲಿ ಪುಸ್ತಕಗೂಡು ಕಾರ್ಯಕ್ರಮವನ್ನು ಸ್ಥಾಪಿಸುವ ಉದೇಶವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ ಇನ್ನೂಳಿದ ಗ್ರಾ.ಪಂ ಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು. ವಿಶ್ರಾಂತ ಸಮಯದಲ್ಲಿ ಪುಸ್ತಕದ ಜೊತೆ ಕೆಲವು ಸಮಯ ಕಳೆಯುವುದರಿಂದ ಜ್ಞಾನದ ಜೊತೆಗೆ ಬೌದ್ಧಿಕತೆಯ ಮಟ್ಟವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಒಳಗೊಂಡಿದೆ ಎಂದರು.
ಉದ್ಘಾಟನೆ ಕಾರ್ಯ ನೇರವೇರಿಸಿದ ಸೂಳೆಕಲ್ ಗ್ರಾಮದ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮಿ ಅವರು ಪುಸ್ತಕ ಗೂಡಿನ ಮಹತ್ವನ್ನು ಮಕ್ಕಳಿಗೆ ಕಥೆಯ ಮೂಲಕ ವಿವರಿಸುತ್ತಾ ಗುರುಗಳು ಒಬ್ಬರು ತನ್ನ ಶಿಷ್ಯನಿಗೆ ಪುಸ್ತಕ ನೀಡಿ ಇದು ನಿನ್ನ ದಾರಿಗೆ ಬೆಳಕಾಗುತ್ತದೆ ಎಂದರಂತೆ. ಇದಾದ ಮರುದಿನ ಶಿಷ್ಯನನ್ನು ಗುರುಗಳು ಪುಸ್ತಕದ ಬಗ್ಗೆ ಕೇಳಿದಾಗ ಶಿಷ್ಯ ನಿನ್ನೆ ನನಗೆ ನೀವು ಪುಸ್ತಕ ನೀಡಿದ್ದರಿಂದ ದಾರಿ ದೀಪವಾಯಿತು ಎಂದನಂತೆ. ಅಂದರೆ ರಾತ್ರಿ ತೆರಳುವಾಗ ಕತ್ತಲಾಗಿದ್ದರಿಂದ ಪುಸ್ತಕವನ್ನು ಬೆಂಕಿ ಹಚ್ಚಿಕೊಂಡು ಹಣತೆಯಂತೆ ಬಳಸಿಕೊಂಡನಂತೆ ಈ ಮಾದರಿಯಲ್ಲಿ ಮಕ್ಕಳು ಈ ಪುಸ್ತಕ ಗೂಡನ್ನು ಬಳಸಬಾರದು. ತಾವುಗಳು ಈ ಪುಸ್ತಕ ಗೂಡನ್ನು ಸರ್ಮಪಕವಾಗಿ ಬಳಸಿಕೊಂಡು ಅದರಿಂದ ಮಹತ್ವ ಜ್ಞಾನವನ್ನು ಸಂಪಾದಿಸಬೇಕು ಎಂದು ತಿಳಿಹೇಳಿದರು.
ನಂತರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ತಾಲೂಕಿನ ಫೆಲೋ ಆದ ಡಾ.ತಿಪ್ಪೇಸ್ವಾಮಿ ಎಂ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಹೇಳಿಕೆ ನಮ್ಮಲ್ಲಿ ಜಗತ್ ಜಾಹಿರಾದಂತೆ ಇದೆ. ಆದರೆ ಅದು ತಪ್ಪಾದ ಕ್ರಮ. ಕಲ್ಯಾಣ ಕರ್ನಾಟಕದಲ್ಲಿಯು ಉತ್ತಮ ಕಾರ್ಯಗಳನ್ನು ಮಾಡುವಲ್ಲಿ ಆಸಕ್ತಿದಾಯಕ ಅಧಿಕಾರಿಗಳು, ಸ್ಥಳೀಯ ಆಡಳಿ ವರ್ಗ, ಆಸಕ್ತರು, ಗ್ರಾಮಸ್ಥರು ಇದ್ದಾರೆ. ಅವರಲ್ಲಿ ವಿನೂತನ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಅದರ ಉಪಯೋಗ ಕುರಿತು ಮನವಿ ಮಾಡಿದಲ್ಲಿ ಕಲ್ಯಾಣ ಕರ್ನಾಟಕ ಹೆಸರಿಗೆ ತಕ್ಕ ಹಾಗೆ ಕಲ್ಯಾಣ ಸಾಧಿಸುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಈ ಪುಸ್ತಕ ಗೂಡು ನಿಮ್ಮ ಮನೆಯ ಸ್ವತ್ತು, ನಿಮ್ಮ ಸ್ವತ್ತು, ಇದನ್ನು ಹಾಳು ಮಾಡದಂತೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಎಲ್ಲಾ ವಯೋಮಾನದ ಓದುಗರಿಗೆ ಆಸಕ್ತಿದಾಯಕವಾಗುವಂತೆ ಪುಸ್ತಕದ ಗೂಡಿನ ಮೂಲಕ ಒಂದು ವೇದಿಕೆ ಏರ್ಪಡಿಸುವ ಉದ್ದೇಶವನ್ನು ಒಳಗೊಂಡಿದೆ. ಅತಿ ಕಡಿಮೆ ವೆಚ್ಚದಲ್ಲಿ ಬೆಲೆ ಕಟ್ಟಲಾಗದ ಜ್ಞಾನವನ್ನು ಹಂಚುವ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾ.ಪಂ ಗಳಲ್ಲಿ ಈ ಕಾರ್ಯಕ್ರಮವನು ಅನುಷ್ಟಾನ ಮಾಡಲಾಗುವುದು ಎಂದರು.
ಈ ವೇಳೆ ಗ್ರಾ.ಪಂ ಪಿ.ಡಿ.ಓ(ಪ್ರಭಾರೆ) ಹನುಮಂತಪ್ಪ, ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷರಾದ ಶಿವಾನಂದ ವಂಕಲಕುಂಟೆ, ತಾಲ್ಲೂಕ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಗ್ರಾ.ಪಂ ಸದಸ್ಯರು, ಸೇರಿದಂತೆ ಗ್ರಾಮಸ್ಥರು, ಶಾಲಾ ಶಿಕ್ಷಕರು, ಮಕ್ಕಳು, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.