
ಔರಾದ : ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕ ಗಳಿಕೆಗೆ ಪ್ರೇರೆಪಿಸುವ ಜತೆಯಲ್ಲಿ ನೈತಿಕ ಮೌಲ್ಯಗಳನ್ನು ಬೋಧನೆ ಮಾಡುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ ಎಂದು ಡಿಡಿಪಿಐ ಸಲೀಂ ಪಾಷಾ ಹೇಳಿದರು.
ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಿಂದ ಕನಕ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕರು ಅನಗತ್ಯ ಚಟುವಟಿಕೆಗಳಿಂದ ದೂರಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಇಡೀ ವಿಶ್ವಕ್ಕೆ ಸಂಸ್ಕೃತಿಯನ್ನು ಕಲಿಸಿಕೊಟ್ಟ ದೇಶ ನಮ್ಮದಾಗಿದೆ.
ಆದರೆ ಪ್ರಸ್ತುತ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ನಮ್ಮ ದೇಶದಲ್ಲಿ ವಿದ್ಯಾವಂತ ಯುವ ಜನಾಂಗ ಸಮಾಜಘಾತುಕ ಹಾಗೂ ವಿಧ್ವಂಸಕ ಕತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ನೈತಿಕತೆಯನ್ನು ಸಾರುವ ಪಾಠಗಳನ್ನು ತಿಳಿಸಿಕೊಡುವುದು ಅವಶ್ಯಕವಾಗಿದೆ ಎಂದರು.
ಬಿ.ಕೆ ಸುಹಾಸಿನಿ ಬಹೇನ್ ಮಾತನಾಡಿ, ಶಿಕ್ಷಕರು ಉತ್ತಮ ಚಾರಿತ್ರ್ಯದ ಜೊತೆ ಕಠಿಣ ಪರಿಶ್ರಮಿಗಳಾಗಿರಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ದೇಶ ಸದ್ಗುರು ಆಗಲು ಸಾಧ್ಯ. ಇನ್ನೊಬ್ಬರ ಬಗ್ಗೆ ದ್ವೇಷ ಅಸೂಯೆ ಇಟ್ಟುಕೊಳ್ಳುವುದನ್ನು ಬಿಟ್ಟು ಪ್ರೀತಿ ಸಹನೆಯನ್ನು ಮಕ್ಕಳಿಗೆ ಕಲಿಸಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ರಾಘವೇಂದ್ರ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಶಾಂತಾ ಬಹೇನ್, ಗಂಗಾರೆಡ್ಡಿ ಇಂದೂರೆ, ಗೋವಿಂದ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ಸುಮಾರು 200ಕ್ಕೂ ಹೆಚ್ಚಿನ ಉತ್ತಮ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.