
ಔರಾದ:-ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಔರಾದ(ಬಿ) ಶಾಸಕರ ಕಛೇರಿ ಆವರಣದಲ್ಲಿ ಸೆ.30ರಂದು ಜರುಗಿದ ಕಾರ್ಮಿಕರಿಗೆ ನ್ಯೂಟ್ರಿಷನ್ ಕಿಟ್ ಹಾಗೂ ಆರ್.ಪಿ.ಎಲ್ ಕಿಟ್ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಔರಾದ(ಬಿ) ಕ್ಷೇತ್ರದಲ್ಲಿ ಸುಮಾರು 4 ಸಾವಿರ ಕಾರ್ಮಿಕರಿದ್ದಾರೆ. ಇವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಸರ್ಕಾರದ ಯೋಜನೆಗಳು ಕ್ಷೇತ್ರದ ಜನತೆಗೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನಮ್ಮ ಜನತೆಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಯಾವೊಬ್ಬ ಕಾರ್ಮಿಕರ ಬಳಿಯೂ ವಿಮೆ ಸೌಲಭ್ಯ ಇಲ್ಲ. ಏನಾದರೂ ಅನಾಹುತವಾದರೆ ಅವರ ಕುಟುಂಬ ರಸ್ತೆಗೆ ಬರಬೇಕಾಗುತ್ತದೆ. ಹಾಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಮಿಕರಿಗಾಗಿ ವಿಶೇಷ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಕಾರ್ಮಿಕರ ಏಳಿಗೆಯ ಸಂಕಲ್ಪ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವರಂತೆ ಕಾರ್ಮಿಕರ ಅಭಿವೃದ್ಧಿಯಾಗಬೇಕೆಂದು ನಾನು ನಿರಂತರ ಕೆಲಸ ಮಾಡುತ್ತಿದ್ದು, ಅಧಿಕಾರಿಗಳು ಕೂಡ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಮಕಡಿ ಹಿತರಕ್ಷಣೆಗೆ ಪಿಂಚಣಿ ಯೋಜನೆ, ವೈದ್ಯಕೀಯ ನೆರವು, ಕಾರ್ಮಿಕರ ಕಿಟ್ ವಿತರಣೆ, ಅವರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ, ವಿವಾಹ ಸಹಾಯಧನ ಹೀಗೆ ಹತ್ತು ಹಲವು ಯೋಜನೆಗಳಿವೆ. ಈ ಎಲ್ಲ ಯೋಜನೆಗಳು ಪ್ರತಿ ಕಾರ್ಮಿಕರಿಗೆ ಸಿಗಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಇದೇ ವೇಳೆ ಶಾಸಕರು ಕಾರ್ಮಿಕರಿಗೆ ನ್ಯೂಟ್ರಿಷನ್ ಕಿಟ್‌ಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಔರಾದ(ಬಿ) ಪಟ್ಟಣ ಪಂಚಾಯತ ಅಧ್ಯಕ್ಷರಾದ ಸರಬಾಯಿ ಘೂಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕಾರ್ಮಿಕ ಇಲಾಖೆಯ ಔರಾದ ವೃತ್ತ ಕಾರ್ಮಿಕ ನಿರೀಕ್ಷಕ ರಾಹುಲ್ ರತ್ನಾಕರ್, ಮುಖಂಡರಾದ ಕೇರಬಾ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಲಬುರಗಿಯ ಆರ್.ಪಿ.ಎಲ್ ವ್ಯವಸ್ಥಾಪಕ ವೀರಭದ್ರಪ್ಪ ಮಾಶಾಲ್ ಅವರು ಇಲಾಖೆಯ ಯೋಜನೆಗಳು ಮತ್ತು ಆರ್.ಪಿ.ಎಲ್ ಕುರಿತಂತೆ ಮಾಹಿತಿ ನೀಡಿದರು.