
- ಔರಾದ:-ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೆ.20ರಂದು ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಶಾಲೆಯಲ್ಲಿರುವ ಎಲ್ಲ ತರಗತಿ ಕೋಣೆಗಳಲ್ಲಿ ಸಂಚರಿಸಿ ಮಕ್ಕಳ ಸಂಖ್ಯೆ ಹಾಗೂ ಪಠ್ಯ ಚಟುವಟಿಕೆಗಳ ಬಗ್ಗೆ ವಿವರಣೆ ಪಡೆದರು. ತರಗತಿ ಕೋಣೆಗಳಲ್ಲಿ ಅತ್ಯಲ್ಪ ಸಂಖ್ಯೆಯ ಮಕ್ಕಳಿರುವುದನ್ನು ಕಂಡು ಶಾಲೆಯ ಮುಖ್ಯಗುರುಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ಒಳ್ಳೆಯ ಕಟ್ಟಡವನ್ನು ನಿರ್ಮಿಸಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವುದನ್ನು ನೋಡಿ ತೀವ್ರ ಬೇಸರವಾಗುತ್ತಿದೆ. ಮುಖ್ಯಗುರುಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಶಾಲೆ ಮುಚ್ಚುವ ಆತಂಕ ಎದುರಾಗುತ್ತದೆ ಎಂದು ಎಚ್ಚರಿಸಿದರು. ಶಿಕ್ಷಕರು ಮನೆ-ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬೇಕೆಂದು ಸೂಚಿಸಿದರು. ಶಾಲೆ ಆವರಣದಲ್ಲಿ ಕಸ ಕಡ್ಡಿಗಳು ಬಿದ್ದಿರುವುದನ್ನು ಕಂಡು ಶಾಲೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
ಶಾಲೆಯ ಮುಖ್ಯಗುರುಗಳು ಗ್ರಾಮಸ್ಥರೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ. ಸರಿಯಾದ ಮಾಹಿತಿ ನೀಡುವುದಿಲ್ಲ. ಏನು ಕೇಳಿದರೂ ಹಾರಿಕೆ ಉತ್ತರ ಕೊಡುತ್ತಾರೆಂದು ಗ್ರಾಮಸ್ಥರು ಮುಖ್ಯಗುರುಗಳ ಬಗ್ಗೆ ಶಾಸಕರಿಗೆ ತಿಳಿಸಿದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡು ಜನರೊಂದಿಗೆ ಸರಿಯಾಗಿ ಮಾತನಾಡಿಸಿ, ಕಲಿಕೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಶಾಸಕರು ಮುಖ್ಯಗುರುಗಳಿಗೆ ತಿಳಿಸಿದರು.
ಇದೇ ವೇಳೆ ಹೆಚ್ಚುವರಿ ತರಗತಿ ಕೋಣೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರೊಬ್ಬರು ಮನವಿ ಸಲ್ಲಿಸಿದಾಗ, ಶಾಲೆಯಲ್ಲಿ ಮಕ್ಕಳೇ ಇಲ್ಲ. ಇರುವ ಶಾಲೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಇಂಥದರಲ್ಲಿ ಹೊಸ ಕಟ್ಟಡ ಹೇಗೆ ಕೊಡಲಿ ಎಂದು ಗ್ರಾಮಸ್ಥರಿಗೆ ಪ್ರಶ್ನಿಸಿದರು. ಮಕ್ಕಳ ಸಂಖ್ಯೆ ಹೆಚ್ಚಿಸಿದಲ್ಲಿ ಏನು ಕೇಳಿದರೂ ಕೊಡುತ್ತೇನೆಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅಂಗನವಾಡಿಗೆ ಭೇಟಿ: ಸಾವಳಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಮಕ್ಕಳ ಸಂಖ್ಯೆ, ಹಾಜರಾತಿ, ಊಟದ ವ್ಯವಸ್ಥೆಯನ್ನು ಗಮನಿಸಿದರು. ಇಲ್ಲಿಯು ಮಕ್ಕಳ ಸಂಖ್ಯೆ ಕಡಿಮೆಯಿರುವುದಕ್ಕೆ ಸ್ಥಳದಲ್ಲಿದ್ದ ಅಂಗನವಾಡಿ ಸಿಬ್ಬಂದಿಯ ವಿರುದ್ಧ ಕಿಡಿಕಾರಿದರು.
ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ವಿತರಿಸುವ ಆಹಾರ ಪದಾರ್ಥಗಳನ್ನು ತೆರೆದು ನೋಡಿದಾಗ ಕಳಪೆ ಗುಣಮಟ್ಟದ ಆಹಾರ ವಸ್ತುಗಳು ಕಾಣಿಸಿದವು. ಆಹಾರ ಉತ್ಪನ್ನಗಳು ಸರಿಯಾಗಿ ಇದ್ದರೆ ಮಾತ್ರ ಮಕ್ಕಳು ಮತ್ತು ಮಹಿಳೆಯರಿಗೆ ನೀಡಬೇಕು. ಇಲ್ಲವೆ ಹಿಂದುರಿಗಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಕಳಪೆ ಆಹಾರದಿಂದ ಮಕ್ಕಳಿಗೆ ಏನಾದರೂ ಆದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಎಚ್ಚರಿಸಿದರು.